ಹಾಲಿಗೆ 2ರೂ. ಪ್ರೋತ್ಸಾಹ ಧನ ಹೈನುಗಾರರ ಕಣ್ಣೊರೆಸುವ ತಂತ್ರ : ಎನ್ ಮಂಜಯ್ಯ ಶೆಟ್ಟಿ ಸಬ್ಲಾಡಿ
ಉಡುಪಿ ನ.1(ಉಡುಪಿ ಟೈಮ್ಸ್ ವರದಿ): ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಗಳ ಒಕ್ಕೂಟ ಲಿಟರ್ ಗೆ 2 ರೂ. ಪ್ರೋತ್ಸಾಹ ಧನ ಘೋಷಿಸಿರುವುದು ಹೈನುಗಾರರ ಕಣ್ಣೊರೆಸುವ ತಂತ್ರವೇ ಹೊರತು ಇದು ಶಾಶ್ವತ ಪರಿಹಾರವಲ್ಲ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಪ್ರಗತಿಪರ ಹೈನುಗಾರರು ಇದರ ನಿರ್ದೇಶಕ ಎನ್ ಮಂಜಯ್ಯ ಶೆಟ್ಟಿ ಸಬ್ಲಾಡಿ ಅವರು ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹಾಲಿನ ದರ ಏರಿಕೆಯಾಗದೆ ಸುಮಾರು 4 ವರ್ಷಗಳು ಕಳೆದಿದೆ. ಆದರೆ ಹಾಲು ಒಕ್ಕೂಟ ಮತ್ತು ಸರಕಾರ ಈವರೆಗೂ ಹೈನುಗಾರರ ಬೇಡಿಕೆ ಬಗ್ಗೆ ಸ್ಪಂದಿಸಲಿಲ್ಲ. ಈ ಬಾರಿಯ ಮಹಾಸಭೆಯಲ್ಲಿ ರೈತರ ಹಾಲಿನ ದರ ಹೆಚ್ಚಿಸಬೇಕು. ಇಲ್ಲವಾದಲ್ಲಿ ಹೈನುಗಾರರ ಜೊತೆ ಸೇರಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರೂ ಒಕ್ಕೂಟ ಈ ಬಗ್ಗೆ ಗಮನ ಕೊಡಲಿಲ್ಲ. ಆದರೆ ಇದೀಗ ಹೈನುಗಾರರ ಪ್ರತಿಭಟನೆ ಮಾಡುತ್ತಾರೆಂದು ತಿಳಿದು ಅದನ್ನು ತಡೆಯುವ ಉದ್ದೇಶದಿಂದ ಈ 2 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಹಾಲಿಗೆ 2 ರೂಪಾಯಿಯನ್ನು ಕಡಿತಗೊಳಿಸಿದ್ದಾರೆ. ಈಗ ಎರಡು ರೂಪಾಯಿ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ. ಇದೀಗ 1 ರೂ. ಕೊಟ್ಟ ಹಾಗಾಗಿದೆ. ಸರಕಾರ ರೈತರ ಹೈನುಗಾರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೈನುಗಾರರು ಮತ್ತು ಹಾಲು ಸಹಕಾರಿ ಸಂಘಗಳು ಕಷ್ಟದಲ್ಲಿವೆ. ಹಾಲಿನ ದರವನ್ನು ಸರಕಾರ ನಿಗದಿ ಮಾಡುವುದಲ್ಲ, ಒಕ್ಕೂಟವೇ ನಿರ್ಧಾರ ಮಾಡಬೇಕು. ಹಾಲಿನ ದರ ಅಮುಲ್ ಮಾದರಿಯಲ್ಲಿ ಹೆಚ್ಚಾಗಬೇಕು. ಆ ಅಧಿಕಾರ ಹಾಲು ಒಕ್ಕೂಟಕ್ಕೆ ಇರಬೇಕು. ನಮ್ಮ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದ ಹಾಲಿನ ದರ ಪರಿಶೀಲಿಸಿ ನಮ್ಮ ಹೈನುಗಾರರಿಗೆ ಸಿಗುವಂತಾಗಬೇಕು ಎಂದು ತಿಳಿಸಿದ್ದಾರೆ.
ಹಾಲಿನ ದರ ಹೆಚ್ಚಿಳ ಆಗದೇ ಇರುವುದರಿಂದ ರೈತರು ಮತ್ತು 723 ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಾವಿರಗಟ್ಟಲೆ ನೌಕರರು ಸಂಕಷ್ಟದಲ್ಲಿದ್ದಾರೆ. ಹಾಲು ಸಂಗ್ರಹಣೆ ಕಡಿಮೆ ಆದಾಗ ಒಕ್ಕೂಟಕ್ಕೆ ಲಾಭವಾಗಬಹುದು ಆದರೆ ಸಂಘಕ್ಕೆ ಬರುವ ಕಮಿಷನ್ ಕಡಿಮೆ ಅಗುತ್ತಿದೆ. ಇದರಿಂದಾಗಿ ಕೆಲವು ಸಹಕಾರಿ ಸಂಘಗಳಿಗೆ ತನ್ನ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಒಕ್ಕೂಟದ ವ್ಯವಹಾರ ಮಾಡುವಾಗ ಸಹಕಾರಿ ಸಂಘಗಳಿಗೆ 40 ಪೈಸೆಯನ್ನು ಮತ್ತು ವಿಮೆಗೆ 40 ಪೈಸೆಯನ್ನು ರೈತರ ಹಾಲಿನ ದರದಿಂದ ಕಡಿತಗೊಳಿಸುತ್ತಾರೆ. ಹಾಗೆಯೇ ಬೇರೆ ಬೇರೆ ನಿಧಿಗಳಿವೆ. ಇದರಿಂದ ಶಾಶ್ವತವಾಗಿ 4 ರೂ. ಹಾಲು ಲೀಟರಿಗೆ ಹೆಚ್ಚಿಸಲು ಸಾಧ್ಯವಿದೆ. ಇದನ್ನು ಗಮನಿಸಬೇಕಾಗಿದೆ. ಹಾಲಿನ ದರ ಕಾಲಕಾಲಕ್ಕೆ ನಿಗದಿಯಾಗಬೇಕು. ಅಮುಲ್ ಮಾದರಿಯಲ್ಲಿ ವೈಜ್ಞಾನಿಕ ದರ ನಿಗದಿ ಮಾಡಬೇಕು. ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ಕೊಡಬೇಕು. ದರ ಏರಿಕೆಯ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು. ಪ್ರಸುತ್ತ ಸಕ್ಕರೆಗೂ ಇಲ್ಲದಿರುವ ನಿಯಂತ್ರಣ ಹಾಲಿಗೆ ಏಕೆ..? ಹೈನುಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದಡೆ ಮೇವಿನ ಕೊರತೆಯಾದರೆ ಇನ್ನೊಂದಡೆ ಜಾನುವಾರಗಳ ಖಾಯಿಲೆಗಳು ಜಾಸ್ತಿಯಾಗುತ್ತಿದೆ. ಇದನ್ನು ಸರಕಾರ ಗಮನಹರಿಸಬೇಕು. ಸರಕಾರ ಮತ್ತು ಒಕ್ಕೂಟ ಕೂಡಲೇ ಹಾಲಿನ ದರ 45 ಲೀ. ಗೆ ಹೆಚ್ಚಿಸಬೇಕು. ಒಕ್ಕೂಟ 2 ರೂಹೆಚ್ಚಿಸಿದ್ದು ಹೈನುಗಾರರ ಕಣ್ಣೀರೊರೆಸುವ ತಂತ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಮಾಜಿ ಎಚ್ ವಿಠ್ಠಲ ಶೆಟ್ಟಿ ಶೇಡಿಕೂಡ್ಲು, ಜಗದೀಶ ಕಾರಂತ ಐರೋಡಿ, ಮಾಜಿ ನಿರ್ದೇಶಕರಾದ ಕೆ.ಸೋಮಶೇಖರ ಶೆಟ್ಟಿ ಕೆಂಜನೂರು, ಟಿ.ಸೂರ್ಯ ಶೆಟ್ಟಿ ತೆಕ್ಕಟ್ಟೆ, ಅಶೋಕ ಶೆಟ್ಟಿ ಮಡ್ಕಿನ ಜೆಡ್ಡು ಅವರು ಉಪಸ್ಥಿತರಿದ್ದರು.