ಉಡುಪಿ : ನ.4-6 ಅಮೇರಿಕಾ ಸಂಜಾತ ದೃಢವ್ರತ ಗೋರಿಕ್ ರ ಚಿತ್ರಕಲಾ ಪ್ರದರ್ಶನ
ಉಡುಪಿ ನ.1 : ಅಮೇರಿಕಾ ಸಂಜಾತ ದೃಢವ್ರತ ಗೋರಿಕ್ ಅವರ ದಿವ್ಯಕಲಾ ಚಿತ್ರಕಲಾ ಪ್ರದರ್ಶನವು ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ನ.4 ರಿಂದ 6ರವರೆಗೆ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಅವರು, ನ.3 ರಂದು ಸಂಜೆ 5:30 ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕುಮಾರ್ ಅವರು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನ. 4, 5 ಮತ್ತು 6 ರಂದು ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಚಿತ್ರಕಲಾಸಕ್ತರಿಗೆ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಹಾಗೂ ಇವರ 32 ಚಿತ್ರಕಲಾಕೃತಿಗಳು ಪ್ರದರ್ಶನದಲ್ಲಿದ್ದು, ಕಲಾವಿದರೊಂದಿಗೆ ಸಂವಾದವನ್ನು ಕೂಡಾ ನಡೆಸಬಹುದು. ಇಲ್ಲಿ ಪೇಪರ್, ಕ್ಯಾನ್ವಸ್, ಮರ, ವಿವಿಧ ದೇಶಗಳ ವಿಶೇಷ ಬಣ್ಣಗಳನ್ನು ಬಳಸಿ ವಾಸ್ತು ಪ್ರಕಾರಗಳು, ದೇವಾಲಯದ ಶಿಖರ, ನಟರಾಜ, ನರಸಿಂಹನ ಬೇರೆಬೇರೆ ರೀತಿಯ ಅವತಾರಗಳು ಸಹಿತ ಹಲವಾರು ವಿಶಿಷ್ಟ ಚಿತ್ರಕಲೆಗಳನ್ನು ಕಣ್ಣುಂಬಿಕೊಳ್ಳಬಹುದಾಗಿದೆ ಎಂದು ಹೇಳಿದರು.
ದೃಢವ್ರತ ಗೋರಿಕ್ ಅಮೆರಿಕದಲ್ಲಿ ಹುಟ್ಟಿ ಬೆಳೆದವರಾಗಿದ್ದು ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಕಲೆಗಳಲ್ಲಿ ತರಬೇತಿ ಪಡೆದ ಕಲಾವಿದರಾಗಿದ್ದಾರೆ. ಇವರು ಕಲಾಕೃತಿಗಳ ಮೂಲಕ ಭಕ್ತಿ ಕಲೆಗೆ ನವ ಚೈತನ್ಯ ತುಂಬಿದವರು. ದೇವರ ಸ್ವರೂಪಗಳನ್ನು ಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ ಆಳವಾದ ಅಧ್ಯಯನ ನಡೆಸಿ ಅದನ್ನು ಚಿತ್ರಕಲೆ ಮೂಲಕ ಅಭಿವ್ಯಕ್ತಪಡಿಸಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.