ದ.ಕ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ. ಆರ್. ನೇಮಕ
ಮಂಗಳೂರು ನ.1 : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ.ಆರ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಸೋಮವಾರ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ತಕ್ಷಣ ಜಾರಿಗೆ ಬರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಹಿಂದಿನ ಡಿಸಿ ಡಾ.ರಾಜೇಂದ್ರ ಕೆ.ವಿ ವರ್ಗಾವಣೆಗೊಂಡ ಬಳಿಕ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಡಾ.ಕುಮಾರ್ ಅವರಿಂದ ಶೀಘ್ರದಲ್ಲಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ರವಿ ಕುಮಾರ್ ಎಂ ಆರ್ ಅವರು ಕನ್ನಡಿಗರಾಗಿದ್ದು, 2012 ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐಎಎಸ್ ಆಗಿದ್ದರು. ಇವರು ಈ ಹಿಂದೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಈ ಮೊದಲು ಅವರು ರೇಷ್ಮೆ ಮಾರುಕಟ್ಟೆ ನಿಗಮದ ಆಡಳಿತ ನಿರ್ದೇಶಕರಾಗಿ, ಬೆಳಗಾವಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.