ಮುನಿಯಾಲು ಗೋಧಾಮ ದೇಶಕ್ಕೆ ಮಾದರಿ: ಎಂ.ಎಸ್.ಮಹಾಬಲೇಶ್ವರ್

ಹೆಬ್ರಿ ಅ.31 : ಮುನಿಯಾಲಿನಲ್ಲಿರುವ ಸಂಜೀವಿನಿ ಫಾರ್ಮ್ ಮತ್ತು ಡೇರಿ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದಲ್ಲಿ ದೇಶಿ ಗೋವುಗಳ ಹಾಲಿನ ವಿವಿಧ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ದೇಶಿ ಗೋವುಗಳ ಹಾಲಿನ ವಿವಿಧ ಉತ್ಪನ್ನಗಳನ್ನು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿ.ಇ.ಒ ಎಂ.ಎಸ್. ಮಹಾಬಲೇಶ್ವರ್ ಅವರು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಉನ್ನತ ಸ್ಥಾನವಿದೆ. ನಮ್ಮ ದೇಶಿ ಸಂಸ್ಕೃತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಲು ಮುನಿಯಾಲು ಗೋಧಾಮದಿಂದ ಸಾದ್ಯವಾಗಿದೆ. ದೇಸಿ ಉತ್ಪನ್ನಗಳ ಮೂಲಕ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ. ಗೋಮಾತೆಯ ಜೊತೆ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಗೋಧಾಮ ವಹಿಸುತ್ತಿದೆ. ಗೋಧಾಮದ ಮೂಲಕ ಸ್ವದೇಶಿ ಉದ್ಯಮಕ್ಕೆ ನಮ್ಮ ಯುವಜನತೆಯನ್ನು ಮುನಿಯಾಲು ಗೋಧಾಮ ಸೆಳೆದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಹಾಗೂ ಶ್ರೀ ಕೃಷ್ಣ ಗೋವಿನಲ್ಲಿ ದೇವರು ನೆಲೆಸಿದ್ದಾನೆ, ಹೀಗಾಗಿ ನಾನು ಗೋವುಗಳ ಮಧ್ಯೆಯೇ ವಾಸಿಸುತ್ತೇನೆ ಎಂದು ಶ್ಲೋಕದ ಮೂಲಕ ತಿಳಸಿದ್ದಾನೆ. ಆಧುನಿಕತೆಗೆ ಒತ್ತುನೀಡುತ್ತಿರುವ ಇಂದಿನ ಸಮಾಜದಲ್ಲಿ ರಾಮಕೃಷ್ಣ ಆಚಾರ್ ಮತ್ತು ಸವಿತಾ ಆಚಾರ್ ಅವರು ಮುನ್ನಡೆಸುತ್ತಿರುವ ಗೋಧಾಮದ ಸೇವೆ ವಿಶೇಷವಾಗಿದೆ. ರಾಮಕೃಷ್ಣ ಆಚಾರ್ ಲೋಕಲ್ ನಲ್ಲಿ ಬೆಳೆದು ಗ್ಲೋಬಲ್ ಆಗಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.

ಈ ವೇಳೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್. ಯಡಪಡಿತ್ತಾಯ ಅವರು ಮಾತನಾಡಿ, ಹೆತ್ತ ತಾಯಿಯ ನಂತರದ ಸ್ಥಾನದಲ್ಲಿ ಗೋ ಮಾತೆಯನ್ನು ಕಾಣುತ್ತೇವೆ. ಇಂತಹ ಗೋ ಮಾತೆಯನ್ನು ಆರೈಕೆ ಮಾಡುತ್ತಾ, ಅದರ ಜೊತೆಗೆ ಮುಂದಿನ ಪೀಳಿಗೆ ಗೋವು ಎಂಬ ಕಲ್ಪವೃಕ್ಷದ ಮಾಹಿತಿಯನ್ನು ಗೋಧಾಮ ಲೋಕಕ್ಕೆ ತಿಳಿಸುತ್ತಿದೆ. ಅಧ್ಯಯನ ದೃಷ್ಟಿಯಿಂದ ವಿದ್ಯಾರ್ಥಿಗಳು ಗೋಧಾಮಕ್ಕೆ ಭೇಟಿ ನೀಡುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗೋಧಾಮದ ಸಂಸ್ಥಾಪಕರಾದ ರಾಮಕೃಷ್ಣ ಆಚಾರ್ ಅವರು ಮಾತನಾಡಿ, ನಾವು ವಿದೇಶಿ ಸಂಸ್ಕøತಿಗೆ ಮಾರುಹೋಗಿ ನಮ್ಮ ದೇಶೀ ಸಂಸ್ಕೃತಿ, ಸ್ವಂತಿಕೆಯನ್ನು ಕಳೆದುಕೊಂಡಿರುವಂತಹ ಸ್ಥಿತಿಯಲ್ಲಿ ಗೋಧಾಮವು ಪ್ರಾಚೀನ ಭಾರತದ ಹಳ್ಳಿಯ ಜೀವನ, ಗೋ ಸಾಕಾಣಿಕೆ, ಪ್ರಾಣಿ ಪಕ್ಷಿಗಳು, ಕೃಷಿ ಆಧಾರಿತ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಮುಂದಿನ ಜನಾಂಗವು ‘ಮರಳಿ ಹಳ್ಳಿಗೆ’ ಬರುವಂತೆ ಆಕರ್ಷಿಸುವ ಮಹತ್ತರ ಕೆಲಸ ಮಾಡುತ್ತಿದೆ. ಸಾಫ್ಟ್ ವೇರ್, ಮೆಡಿಕಲ್, ಇಂಜಿನಿಯರಿಂಗ್ ಅಥವಾ ಯಾವುದೇ ವೃತ್ತಿಪರ ಉದ್ಯೋಗದಷ್ಟೇ ಹೈನುಗಾರಿಕೆಯು ಮೌಲ್ಯಯುತವಾಗಿದೆ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ. ನಮ್ಮನ್ನು ಬೆಂಬಲಿಸಿದ ಸರ್ವರಿಗೂ ಋಣಿಯಾಗಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬೋಳ ಸುರೇಂದ್ರ ಕಾಮತ್ ಎಂಡ್ ಸನ್ಸ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಬೋಳ ದಾಮೋದರ್ ಕಾಮತ್, ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಂಗಳೂರಿನ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ದೇಶಿ ಗೋವಿನ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇದೇ ವೇಳೆ ಗೋಪೂಜನವನ್ನು ಉದ್ಯಮಿ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ್ ದಂಪತಿಗಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮದ ನಟರಾದ ದೀಪಕ್ ರೈ ಪಾಣಾಜೆ, ಚಂದ್ರಕಲಾ ರಾವ್, ಸತೀಶ್ ಆಚಾರ್ ಪೆರ್ಡೂರು ಮತ್ತು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾಂಕ್ ಪಡೆದ ಕುಂಟಾಡಿ ವಿಜಯ ಕುಮಾರ್ ಸಹಿತ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಾಗೃತಿ ನಾಯಕ್ ಪ್ರಾರ್ಥಿಸಿದರು. ಗೋಧಾಮದ ಟ್ರಸ್ಟಿ ಸವಿತ ಅರ್ ಅಚಾರ್ ಸ್ವಾಗತಿಸಿದರು. ಪುರೋಹಿತ್ ದಾಮೊದರ್ ಶರ್ಮ ನಿರೂಪಿಸಿದರು, ಸುಕುಮಾರ್ ಮುನಿಯಾಲ್ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!