ನ. 4-6 : ಉಡುಪಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ

ಉಡುಪಿ ಅ.31 (ಉಡುಪಿ ಟಮ್ಸ್ ವರದಿ) : ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆಟ್ರ್ಸ್ ಕೊಡವೂರು ಇದರ ವತಿಯಿಂದ ನವೆಂಬರ್ 4, 5, 6 ರಂದು ಉಡುಪಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟ ನಡೆಯಲಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕ ಪ್ರವೀಣ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ಪರ್ಧಾಕೂಟದ ಉದ್ಘಾಟನೆಯು ನವೆಂಬರ್ 4 ರಂದು ಮಧ್ಯಾಹ್ನ 2.30 ಕ್ಕೆ ನಡೆಯಲಿದೆ. ನಾಡೋಜ ಡಾ. ಜಿ. ಶಂಕರ್ ರವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ರವರು ಗ್ರ್ಯಾಂಡ್ ಮಾಸ್ಟರ್ ಪುತ್ತಳಿಯನ್ನು ಅನಾವರಣಗೊಳಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸ್ಪರ್ಧಾಕೂಟವು ನವೆಂಬರ್ 4, 5 ಹಾಗೂ 6 ರಂದು ಉಡುಪಿಯ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ದೇಶದ 24 ರಾಜ್ಯಗಳಿಂದ ಸುಮಾರು 2000 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಇದರ ಜತೆಗೆ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ 160 ರೆಫ್ರಿಗಳು ಕೂಡ ಭಾಗವಹಿಸುತ್ತಿದ್ದಾರೆ. ಸ್ಪರ್ಧಾಕೂಟದಲ್ಲಿ ವೈಯುಕ್ತಿಕ ಕಟಾ, ವೈಯುಕ್ತಿಕ ಕುಮಿಟೆ, ತಂಡ ಕಟಾ ಅಲ್ಲದೆ ಈ ಬಾರಿ ಹೊಸ ರೀತಿಯ ತಂಡ ಕುಮಿಟೆ ಸ್ಪರ್ಧೆಯನ್ನೂ ಸೇರಿಸಲಾಗಿದೆ. ಸ್ಪರ್ಧಿಗಳ ಬೆಲ್ಟ್, ವಯಸ್ಸು, ಹಾಗೂ ದೇಹ ತೂಕದ ಆಧಾರದಲ್ಲಿ ವಿವಿಧ ವಿಭಾಗಗಳಿದ್ದು, ಸುಮಾರು 250 ಉಪ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ಬುಡೋಕಾನ್ ಕರಾಟೆ ಡೋ ಇಂಟರ್ ನ್ಯಾಶನಲ್ ವಿಶ್ವದ ದೊಡ್ಡ ಕರಾಟೆ ಶೈಲಿಗಳಲ್ಲಿ ಒಂದಾಗಿದ್ದು, ಮಲೇಶ್ಯಾದಲ್ಲಿ ಗ್ರ್ಯಾಂಡ್ ಮಾಸ್ಟರ್ ಚ್ಯೂ ಚೂ ಸೂಟ್ ಇವರಿಂದ ಸ್ಥಾಪಿಸಲ್ಪಟ್ಟಿದ್ದಾಗಿದೆ. ಬುಡೋಕಾನ್ ಕರಾಟೆ ಡೋ ಇಂಟರ್ ನ್ಯಾಶನಲ್ ಇದರ ಅಧ್ಯಕ್ಷ ಸಿ. ಹನುಮಂತರಾವ್ ಇವರ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇವರು ತಾಂತ್ರಿಕ ಸಲಹೆಯನ್ನು ನೀಡಲಿದ್ದಾರೆ. 1980 ರಲ್ಲಿ ಹೈದರಾಬಾದ್‍ನಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸ್ಪರ್ಧಾಕೂಟ ನಡೆದ ನಂತರ ಪ್ರತಿ ವರ್ಷ ದೇಶದ ವಿವಿಧ ಭಾಗಗಳಲ್ಲಿ ಈ ಸ್ಪರ್ಧಾಕೂಟ ನಡೆಯುತ್ತಾ ಬಂದಿದೆ. ಈ ಬಾರಿ 40 ನೇ ಸ್ಪರ್ಧಾಕೂಟವನ್ನು ನಡೆಸಲು ಕೊಡವೂರು ಶಾಖೆ ಮುಂದೆ ಬಂದಿದ್ದು, ಕೊಡವೂರು ಶಾಖೆಯ ಶಿಕ್ಷಕ ಕೃಷ್ಣ ಜಿ. ಕೋಟ್ಯಾನ್ ಇವರು ಈ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವಪ್ಪ ಕಾಂಚನ್, ಶಿಕ್ಷಕ ಕೃಷ್ಣ ಜಿ ಕೋಟ್ಯಾನ್ , ಕಾರ್ಯದರ್ಶಿ ಕಿರಣ್ ಕುಂದರ್, ಸಲಹೆ ಗಾರರರಾದ ಅನಂದ್ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!