ಬಿಜೆಪಿ ಸರಕಾರದಲ್ಲಿ ಕೆಲ ಸಚಿವರು ಜೆಸಿಬಿ, ಹಿಟಾಚಿಯಲ್ಲಿ ಹಣ ಬಾಚುತ್ತಿದ್ದಾರೆ : ಎಚ್.ಡಿ.ಕೆ ಆರೋಪ

ಬೆಂಗಳೂರು, ಅ.31 : ಬಿಜೆಪಿ ಸರಕಾರದಲ್ಲಿ ಕೈನಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿ, ಹಿಟಾಚಿಯಲ್ಲಿ ಬಾಚುತ್ತಿದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಹೊರತು ಪಡಿಸಿ ಉಳಿದ ಎಲ್ಲರೂ ದುಡ್ಡಿನ ದಂಧೆ ಮಾಡಲು ಬಾಗಿಲು ತೆಗೆದುಕೊಂಡು ಕೂತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಬಿಜೆಪಿ ಸರಕಾರದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಒಬ್ಬರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ. ಎಲ್ಲರೂ ದುಡ್ಡಿನ ದಂಧೆ ಮಾಡಲು ಬಾಗಿಲು ತೆಗೆದುಕೊಂಡು ಕೂತಿದ್ದಾರೆ’ ಎಂದು ಆರೋಪಿಸಿದ್ದಾರೆ ಹಾಗೂ ಕೆಲ ಸಚಿವರು ಎಷ್ಟೇ ಶ್ರೀಮಂತರಿದ್ದರೂ ಅವರಿಗೆ ಹಣದ ದಾಹ ಕಡಿಮೆಯಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟನ್ನೂ ಗೋರುತ್ತಿದ್ದಾರೆ. ಈ ಸರಕಾರದಲ್ಲಿ ಕೈನಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ, ಹಿಟಾಚಿಯಲ್ಲಿ ಬಾಚುತ್ತಿದ್ದಾರೆ. ಆದೇನು ತನಿಖೆ ಮಾಡುತ್ತಾರೋ ನೋಡೋಣ. ಈ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಇಲಾಖೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಸಚಿವ ಎಂಟಿಬಿ ನಾಗರಾಜ್ ಯಾಕೆ ಹಾಗೆ ಹೇಳಿದರು..? ಅದರ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಎಲ್ಲವೂ ಗೊತ್ತಿದೆ. ನಂದೀಶ್ 80 ಲಕ್ಷ ರೂ.ಕೊಟ್ಟು ಮೂರು ತಿಂಗಳು ಆಗಿರಲಿಲ್ಲ. ಅಷ್ಟರಲ್ಲಿ ಅವರನ್ನು ಅಮಾನತು ಮಾಡಿದರು. ಅದರ ನೋವಿನಲ್ಲಿ ನಂದೀಶ್ ಗೆ ಹೃದಯಾಘಾತ ಆಗಿರಬಹುದು. ಅಲ್ಲಿನ ಶಾಸಕರಿಗೆ ಎಷ್ಟು ಹೋಗಿದೆ, ಯಾರ್ಯಾರಿಗೆ ಎಷ್ಟು ಹೋಗಿದೆ. ಎಲ್ಲವೂ ತನಿಖೆ ಮಾಡಿದ್ರೆ ಹೊರಬರಲಿದೆ ಎಂದು ಒತ್ತಾಯಿಸಿದರು. ಹಾಗೂ ಸಚಿವ ಎಂಟಿಬಿ ನಾಗರಾಜ್ ವಿಡಿಯೋ ಜಗಜ್ಜಾಹೀರು ಆಗಿದೆ. ಸರಕಾರಕ್ಕೆ ಮರ್ಯಾದೆ ಇದ್ದರೆ ತನಿಖೆ ಮಾಡಿಸಲಿ. ಈಗಾಗಲೇ ಸಿಎಂ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಆದರೆ, ಏನು, ಯಾವ ರೀತಿ ತನಿಖೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಜೆಡಿಎಸ್ ಎಲ್ಲರಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದೆ ಎಂದ ಅವರು, ಬೇರೆ ಪಕ್ಷಗಳಲ್ಲಿ ಅನೇಕ ಪಟ್ಟಿಗಳಿವೆ. ಅವುಗಳ ಪಾಲಿಗೆ ಪಟ್ಟಿಗಳೆ ಫಜೀತಿ ಆಗಲಿವೆ. ಈಗಾಗಲೇ 123 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಅವರಿಗೆಲ್ಲ ಕೆಲಸ ಪ್ರಾರಂಭ ಮಾಡಲು ಹೇಳಿದ್ದೇನೆ. ನಾವು ಯಾವುದೇ ಪ್ರಚಾರ ಮಾಡದೇ ಕೆಲಸ ಪ್ರಾರಂಭ ಮಾಡಿದ್ದೇವೆ’ ಎಂದರು. ಹಾಗೂ ಕೋಲಾರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದಲ್ಲಿಯೇ ಸ್ಪರ್ಧೆ ಮಾಡುತ್ತೇನೆಂದು ಈಗಾಗಲೇ ಹೇಳಿದ್ದೇನೆ. ಕಾರ್ಯಕರ್ತರು ನನ್ನ ಮೇಲಿನ ಅಭಿಮಾನದಿಂದ ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಹೇಳಿದ್ದಾರೆ. ಅಲ್ಲಿನ ಜನರ ಸಮಸ್ಯೆ ಏನಿದೆ ಅಂತ ನನಗೆ ಗೊತ್ತಿದೆ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಕೆಜಿಎಫ್ ಬಿಟ್ಟು ಉಳಿದ ಕಡೆ ನಮ್ಮ ಶಾಸಕರು ಇದ್ದಾರೆ. ನಾನೇ ಹೋಗಿ ಸ್ಪರ್ಧೆ ಮಾಡಬೇಕು ಎಂದು ಇಲ್ಲ. ಎಲ್ಲ ಮುಖಂಡರ ಜತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!