ಮತ್ತೆ 40% ಕಮಿಷನ್ ಸದ್ದು : ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗುತ್ತಿಗೆದಾರ
ಹುಬ್ಬಳ್ಳಿ ಅ.31 : ಸರಕಾರದ ಮೇಲೆ 40 ಶೇ. ಕಮೀಷನ್ ಪಡೆಯುತ್ತಿರುವ ಆರೋಪ ಮಾಡಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದು ಒಂದು ವರ್ಷ ಕೂಡಾ ಆಗಿಲ್ಲ. ಆಗಲೇ ಮತ್ತೋರ್ವ ಗುತ್ತಿಗೆದಾರ ಕಾಮಗಾರಿ ಬಿಲ್ ಪಾಸ್ ಮಾಡಿಲ್ಲ ಎಂದು ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಎಂಬವರು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಧ್ಯಮ ನೀಡಿರುವ ವರದಿ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಬಸವರಾಜ್, ಪಿಪಿಇ ಕಿಟ್ ಗಳು ಸೇರಿ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು. ಆದರೆ ಬಿಲ್ ಪಾವತಿಗೆ ವಿಳಂಬ ಮಾಡಿ ಹಣಕ್ಕೆ ಒತ್ತಾಯ ಮಾಡಿದ್ದಾರೆ ಹಾಗೂ ಈ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ, ಮುಖ್ಯಮಂತ್ರಿ ಅವರ ಕಾರ್ಯಾಲಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಾಧಿಕಾರಿ ನಿರ್ದೇಶನ ನೀಡಿದರೂ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.