ಉಡುಪಿ : ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಿರಿ : ಕೆನಡಿ ಶಾಂತಕುಮಾರ್
ಉಡುಪಿ, ಅ.29 : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಮೂಲಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಸಮುದಾಯದ ಜನತೆ ಪಡೆಯುವಂತೆ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ಸಲಹೆ ನೀಡಿದ್ದಾರೆ.
ಇಂದು ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯದವರಿಗೆ ಇಲಾಖೆ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ವತಿಯಿಂದ ರಾಜ್ಯಾದ್ಯಂತ ಚರ್ಚ್‍ಗಳ ಜೀರ್ಣೋದ್ಧಾರ, ಸ್ಮಶಾನಗಳಿಗೆ ರಕ್ಷಣಾತ್ಮಕ ಗೋಡೆ, ಚರ್ಚ್ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳಿಗೆ, ಕ್ರಿಶ್ಚಿಯನ್ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ, ಕ್ರಿಶ್ಚಿಯನ್ ವೃದ್ಧಾಶ್ರಮಗಳು ಮತ್ತು ಅನಾಥಾಲಯಗಳ ಆಡಳಿತಾತ್ಮಕ ವೆಚ್ಚ ಪಾವತಿ ಮುಂತಾದ ಯೋಜನೆಗಳಿವೆ. ಸಮುದಾಯದ ಜನತೆಗೆ ಈ ಬಗ್ಗೆ ಮಾಹಿತಿಯ ಕೊರತೆ ಇದ್ದು, ಇದಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ಅರಿವು ಮೂಡಿಸಿ, ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಹಾಗೂ ಈ ಕಾರ್ಯಕ್ರಮಗಳಲ್ಲದೇ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಫೆಲೋಶಿಪ್, ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‍ಗಳಲ್ಲಿ ಪ್ರವೇಶಾವಕಾಶ, ಪ್ರೋತ್ಸಾಹಕ ಸಾಲ ಯೋಜನೆಗಳು, ಟ್ಯಾಕ್ಸಿ ಮತ್ತು ಗೂಡ್ಸ್ ವಾಹನಗಳ ಖರೀದಿಗೆ ಸಬ್ಸಿಡಿ, ನೇರ ಸಾಲ, ಶ್ರಮಶಕ್ತಿ ಸಾಲ, ಅರಿವು ಸಾಲ ನೀಡಲಾಗುತ್ತಿದ್ದು, ಈ ಎಲ್ಲಾ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಸಮುದಾಯದ ಜನತೆ
ಪಡೆಯಬೇಕು ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಉಡುಪಿ, ಮೂಡುಬೆಳ್ಳೆ ಮತ್ತು ತೆಗ್ಗರ್ಸೆಯಲ್ಲಿ ಒಟ್ಟು 3 ಕ್ರಿಶ್ಚಿಯನ್ ಸಮುದಾಯ ಭವನಗಳ ನಿರ್ಮಾಣಕ್ಕೆ 1.27 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇನ್ನೂ 2 ಸಮುದಾಯ ಭವನಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನಕ್ಕೆ ಹೋಗಿರುವ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಲಡಾಗುವ ಓವರ್ ಸೀಸ್ ಸ್ಕಾಲರ್ ಶಿಪ್ ಯೋಜನೆಯನ್ನು ಮತ್ತೆ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರ ಬಳಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಹಾಗೂ ವಿದೇಶ ವ್ಯಾಸಂಗಕ್ಕೆ ನೀಡುವ ಅನುದಾನದಲ್ಲಿ ಸೂಚಿಸಲಾದ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಪಡೆದರೆ ಮಾತ್ರ ಅನುದಾನದ ಪ್ರಯೋಜನ ಪಡೆಯಬಹುದಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇದೀಗ ಮುಖ್ಯ ಮಂತ್ರಿಗಳು ಈ ಅನುದಾನದಲ್ಲಿ ಇದ್ದ 200 ವಿಶ್ವ ವಿದ್ಯಾನಿಲಯಗಳ ಮಿತಿಯನ್ನು 500 ವಿಶ್ವವಿದ್ಯಾಲಯಗಳಿಗೆ ಏರಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ವಕ್ಫ್ ಬೋರ್ಡ್ ನ ಸದಸ್ಯ ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.