ಭಾರತ್ ಬಂದ್‌ಗೆ ದ.ಕ ಜಿಲ್ಲೆಯಲ್ಲಿ ರಸ್ತೆ ತಡೆದು ಬೆಂಬಲ…!

ಮಂಗಳೂರು : ಕೇಂದ್ರ ಸರ್ಕಾರದ ಕೃಷಿ ಮಸೂದೆ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ರಸ್ತೆ ತಡೆ ನಡೆಸಿ ಬೆಂಬಲ ವ್ಯಕ್ತಪಡಿಸಲಾಯಿತು. ನಗರದ ನಂತೂರು ಸರ್ಕಲ್ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.  ಈ ವೇಳೆ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ  ಹಸಿರು ಸೇನೆ ರೈತ ಸಂಘಟನೆ ಜಿಲ್ಲಾಧ್ಯಕ್ಷ ಓಸ್ವಾಲ್ಡ್  ಫರ್ನಾಂಡೀಸ್ ಅವರು, ದಪ್ಪ ಚರ್ಮದ ರಾಜಕಾರಣಿಗಳಿಗೆ ದೇಶದ ರೈತರ ಸಂಕಟ, ನೋವು ಅರ್ಥವಾಗದ ಕಾರಣ ಅನ್ನ ನೀಡುವ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕೇಂದ್ರ ಸರಕಾರ ಕೊರೋನ ಲಾಕ್ಡೌನ್ ನೆಪದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ರೈತರ ಪಾಲಿನ ಮರಣ ಶಾಸನವಾಗಿದ್ದು, ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.  ರೈತರು ನ್ಯಾಯಕ್ಕಾಗಿ ಬಂದ್ ಮಾಡಿದರೆ ನಷ್ಟ ಎಂದು ಹೇಳುವವರು ಶಾಸಕರನ್ನು ಖರೀದಿಸಿ ಸರಕಾರ ಮಾಡುವಾಗ, ಎರಡೆರಡು ಬಾರಿ ಚುನಾವಣೆ ನಡೆಸಿದಾಗ ಆಗಿರುವ ನಷ್ಟದ ಬಗ್ಗೆ ಮಾತನಾಡಿಲ್ಲ. ನಾವು ಎಲ್ಲಿಯೂ ಬಲಾತ್ಕಾರವಾಗಿ ಬಂದ್ ಮಾಡಿಸಿಲ್ಲ. ಸ್ವಯಂ ಪ್ರೇರಿತವಾಗಿ ರೈತರ ಪರವಾಗಿ ಈ ಬಂದ್ ನಡೆಯುತ್ತಿದೆ ಎಂದ ಅವರು, ಹಲವು ದಿನಗಳಿಂದ ದೇಶದಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಅದನ್ನು ಎದುರಿಸಲಾಗದೆ ರಸ್ತೆಗಳಲ್ಲಿ ಕಂದಕ ನಿರ್ಮಿಸಿ, ಬೇಲಿ ಹಾಕಿ, ಅಶ್ರುವಾಯು ಸಿಡಿಸಿ, ಜಲಫಿರಂಗಿ ಬಳಸಿ ತಾವು ರೈತ ವಿರೋಧಿ ಎಂದು ಸಾಬೀತು ಪಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ತಾಯಿ ಹೃದಯವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಾದವ ಶೆಟ್ಟಿ, ಮನೋಹರ ಶೆಟ್ಟಿ, ಮಾಜಿ ಶಾಸಕ ಐವನ್ ಡಿಸೋಜಾ, ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ, ಮಾಜಿ ಶಾಸಕ ಮೊಯ್ದಿನ್ ಬಾವ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳ ಮುಖಂಡರಾದ ಕ್ರಷ್ಣಪ್ಪ ಸಾಲ್ಯಾನ್, ಆಲ್ವಿನ್ ಮಿನೇಜಸ್, ಸನ್ನಿ ಡಿಸೋಜಾ, ಲಿಯೋ ನಝರತ್, ಶ್ರೀಧರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ,  ಮುನೀರ್ ಕಾಟಿಪಳ್ಳ, ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಶುಂತ, ಪುನೀತ್ ಶೆಟ್ಟಿ, ಜಯಂತಿ ಶೆಟ್ಟಿ, ವಿದ್ಯಾ ದಿನಕರ್, ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್ ಮೊದಲಾದವರು ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!