ದೇಶದ ಎಲ್ಲಾ ಪೊಲೀಸರಿಗೆ ಒಂದೇ ರೂಪದ ಸಮವಸ್ತ್ರ – ಪ್ರಧಾನಿ ಮೋದಿ ಸಲಹೆ
ಸೂರಜ್ ಕುಂಡ್ (ಹರಿಯಾಣ) : ಒಂದೇ ಸಮವಸ್ತ್ರ ಇದ್ದರೆ, ಎಲ್ಲಾ ರಾಜ್ಯದ ಪೊಲೀಸರಿಗೆ ಏಕರೂಪದ ಗುರುತು ದೊರೆಯುತ್ತದೆ ಎಂಬ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.
ಹರಿಯಾಣದಲ್ಲಿ ನಡೆದ ಎರಡು ದಿನಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಪೊಲೀಸರಿಗೆ ಒಂದೇ ಸ್ವರೂಪದ ಸಮವಸ್ತ್ರ ಇದ್ದರೆ, ಅವರನ್ನು ಗುರುತಿಸಲು ಜನರಿಗೆ ಅನುಕೂಲವಾಗು ತ್ತದೆ. ಜತೆಗೆ ಎಲ್ಲಾ ಪೊಲೀಸರಿಗೆ ಒಂದೇ ಗುಣಮಟ್ಟದ ಸಮವಸ್ತ್ರ ದೊರೆಯುತ್ತದೆ ಎಂದರು.
ಹಾಗೂ ಒಂದೇ ಸ್ವರೂಪದ ಸಮವಸ್ತ್ರ ಪರಿಕಲ್ಪನೆಯನ್ನು ನಾನು ಹೇರುತ್ತಿಲ್ಲ. ಸಲಹೆ ನೀಡುತ್ತಿದ್ದೇನೆ ಅಷ್ಟೆ ಎಂದ ಅವರು, ಇದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಐದು ಅಥವಾ ಐವತ್ತು ಅಥವಾ ನೂರು ವರ್ಷಗಳಾಗಬಹುದು. ಆದರೆ, ಆ ದಿಕ್ಕಿನಲ್ಲಿ ನಾವು ಯೋಚಿಸುವುದನ್ನು ಆರಂಭಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ಇನ್ನು ಅಪರಾಧ ಕೃತ್ಯಗಳ ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನಗಳು ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ತಂತ್ರಜ್ಞಾನ ಅಳವಡಿಕೆಗೆ ರಾಜ್ಯ ಸರಕಾರಗಳು ಹಣ ಇಲ್ಲ ಎನ್ನಬಾರದು ಎಂದ ಅವರು, ಪೆನ್ನು ಹಿಡಿದ ನಕ್ಸಲರು ದೇಶದ ಹೊಸ ತಲೆಮಾರಿನ ಜನರ ತಲೆಯನ್ನು ಕೆಡಿಸುತ್ತಿದ್ದಾರೆ. ಇಂತಹವರಿಗೆ ವಿದೇಶಗಳಿಂದ ನೆರವು ಬರುತ್ತಿದೆ. ಇಂತಹ ಕೆಲಸದಲ್ಲಿ ತೊಡಗಿದವರು ಬಂದೂಕು ಹಿಡಿದ ನಕ್ಸಲರಾಗಿರಲಿ ಅಥವಾ ಪೆನ್ನು ಹಿಡಿದ ನಕ್ಸಲರಾಗಿರಲಿ ಅವರನ್ನು ನಾವು ತಡೆಯುತ್ತೇವೆ’ ಎಂದು ಹೇಳಿದ್ದಾರೆ.
ಹಾಗೂ ಇಂದು ಅಪರಾಧ ಎಂಬುದು ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲ. ಅದು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆಯಾಗಿದೆ. ಅದನ್ನು ತಡೆಗಟ್ಟಲು ರಾಜ್ಯಗಳ ನಡುವೆ ಸಹಕಾರವಿರಬೇಕು. ಅಪರಾಧಗಳನ್ನು ತಡೆದರೆ ಮಾತ್ರ ರಾಜ್ಯಗಳ ಅಭಿವೃದ್ಧಿ ಸಾಧ್ಯ. ಸುಳ್ಳು ಸುದ್ದಿ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಒಂದು ಸಣ್ಣ ಸುಳ್ಳು ಸುದ್ದಿಯೂ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಬೇರೆಯವರಿಗೆ ಕಳುಹಿಸುವ ಮುನ್ನ, ಅದು ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ಪರಿಶೀಲಿಸುವುದನ್ನು ಕಲಿತುಕೊಳ್ಳುವ ಅಗತ್ಯವಿದೆ ಎಂದು ಅವರು ಸೂಚನೆ ನೀಡಿದ್ದಾರೆ.