ಕಾಂತಾರ ಚಿತ್ರದ ಹಾಡು ಪ್ರಸಾರಕ್ಕೆ ಬ್ರೆಕ್ ಹಾಕಿದ ನ್ಯಾಯಾಲಯ
ಕೋಝಿಕ್ಕೋಡ್ ಅ.29 : ಕಾಂತಾರಾ ಚಿತ್ರದ “ವರಾಹ ರೂಪಂ” ಹಾಡನ್ನು ಚಿತ್ರಮಂದಿರಗಳು ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‍ಗಳಲ್ಲಿ ಪ್ಲೇ ಮಾಡದಂತೆ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಕೇರಳ ಮೂಲದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ತೈಕುಡಂ ಬ್ರಿಡ್ಜ್ ನಿಂದ ಕೃತಿಚೌರ್ಯದ ದೂರನ್ನು ಸ್ವೀಕರಿಸಿದ ನಂತರ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯವು ಕಾಂತಾರ ಸಿನಿಮಾ ನಿರ್ಮಾಪಕರಿಗೆ “ವರಾಹ ರೂಪಂ” ಹಾಡನ್ನು ಚಿತ್ರಮಂದಿರಗಳು ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‍ಗಳಲ್ಲಿ ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ನ್ಯಾಯಾಲಯದ ತಡೆಯಾಜ್ಞೆಯ ಸುದ್ದಿಯನ್ನು ತೈಕುಡಂ ಬ್ರಿಡ್ಜ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು,ಈ ಪೋಸ್ಟ್‍ನಲ್ಲಿ, “ಕೋಝಿಕ್ಕೋಡ್ ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕಾಂತಾರ ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರಿಗೆ ಅಮೆಝಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರ ಪ್ಲಾಟ್ ಫಾರ್ಮ್ ಗಳಲ್ಲಿ ಅನುಮತಿಯಿಲ್ಲದೆ ವರಾಹ ರೂಪಂ ಹಾಡನ್ನು ನುಡಿಸದಂತೆ ತಡೆಯಾಜ್ಞೆ ನೀಡಿದ್ದಾರೆ” ಎಂದು ತಿಳಿಸಿದೆ.
ಈ ಮೊದಲು ಹೇಳಿಕೆ ನೀಡಿದ್ದ ತೈಕುಡಂ ಬ್ರಿಡ್ಜ್, “ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ ನವರಸಂ' ಮತ್ತು
ವರಾಹ ರೂಪಂ’ ನಡುವಿನ ಅನಿವಾರ್ಯ ಹೋಲಿಕೆಗಳಿದ್ದು, ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಹಾಗೂ 2015 ರಲ್ಲಿ ಬಿಡುಗಡೆಯಾದ “ನವರಸಂ” ಹಾಡನ್ನು ಕೃತಿಚೌರ್ಯ ಮಾಡಿದ ಆರೋಪದ ಮೇಲೆ ಕಾಂತಾರ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ತಾಣದಲ್ಲಿ ತೈಕುಡಂ ಬ್ರಿಡ್ಜ್ ಬ್ಯಾಂಡ್ ಬ್ಯಾಂಡ್ ಘೋಷಿಸಿತ್ತು.