ಟೇಕ್ ಆಫ್‌ಗೂ ಮುನ್ನ ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನದ ಇಂಜಿನ್ ನಲ್ಲಿ ಬೆಂಕಿ
ಹೊಸದಿಲ್ಲಿ ಅ.29 : ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬೆಂಗಳೂರಿಗೆ ಟೇಕಾಫ್ ಆಗುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ವಿಮಾನವು ಐದರಿಂದ ಏಳು ಸೆಕೆಂಡುಗಳಲ್ಲಿ ಟೇಕಾಫ್ ಆಗುತ್ತಿತ್ತು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ರೆಕ್ಕೆಗಳಿಂದ ಬೃಹತ್ ಕಿಡಿಗಳು ಬರುತ್ತಿರುವುದು ಕಂಡು ಬಂದಿದ್ದು ಅದು ಕ್ರಮೇಣ ದೊಡ್ಡ ಪ್ರಮಾಣದ ಬೆಂಕಿಯಾಗಿ ಮಾರ್ಪಟ್ಟಿತು. ಈ ಹಿನ್ನೆಲೆಯಲ್ಲಿ ವಿಮಾನವನ್ನು ತಕ್ಷಣವೇ ನಿಲ್ಲಿಸಲಾಯಿತು. ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ 6ಇ-2131 ರಾತ್ರಿ 9:45 ರ ಸುಮಾರಿಗೆ ತನ್ನ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಿತು. ಮತ್ತು ವಿಮಾನ ನಿಲ್ದಾಣದಲ್ಲಿ “ಪೂರ್ಣ ತುರ್ತುಸ್ಥಿತಿ” ಘೋಷಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಸದ್ಯ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಪ್ರಯಾಣಿಕರಲ್ಲಿ ಒಬ್ಬರಾದ ಪ್ರಿಯಾಂಕಾ ಕುಮಾರ್ ಅವರು ಘಟನೆಯ ವೀಡಿಯೊವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ಎಂಜಿನ್ ಗಳಲ್ಲಿ ಬೆಂಕಿ ಆವರಿಸಿಕೊಂಡಿರುವುದು ಕಂಡುಬಂದಿದೆ.
ಘಟನೆ ಹಿನ್ನೆಲೆಯಲ್ಲಿ “ಆರಂಭದಲ್ಲಿ ಜನರು ಭಯಭೀತರಾಗಿದ್ದರು, ಆದರೆ ಸಿಬ್ಬಂದಿ ಸಹಜವಾಗಿಯೇ ಇದ್ದರು. ನಮಗೆ ನೀರು ನೀಡಿದರು. ಸುತ್ತಲೂ ಸಾಕಷ್ಟು ವಯಸ್ಸಾದ ಜನರು ಮತ್ತು ಮಕ್ಕಳು ಇದ್ದರು. ಈಗ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾಗಿ ವರದಿ ತಿಳಿಸಿದೆ.