ಮಂಗಳೂರು : ಲಂಗರು ಹಾಕಿದ್ದ ಬೋಟ್ ಗಳಿಗೆ ಬೆಂಕಿ
ಮಂಗಳೂರು ಅ.28 : ಲಂಗರು ಹಾಕಿದ್ದ 3 ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಇಂದು ಸಂಜೆ ನಗರದ ಬೆಂಗ್ರೆ ಪ್ರದೇಶದಲ್ಲಿ ನಡೆದಿದೆ.
ಬೆಂಗ್ರೆ ಸಮೀಪದ ರಾತೀಬ್ ಕೊಟ್ಟಿಗೆ ಮಸೀದಿಯ ಬಳಿ ಲಂಗರು ಹಾಕಿದ್ದ ಮೂರು ಬೋಟ್ ಗಳು ಬೆಂಕಿಗಾಹುತಿಯಾಗಿವೆ. ಈ ಬೋಟ್ ಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರದೇಶದಲ್ಲಿ ಲಂಗರು ಹಾಕಿದ್ದ ಬೋಟ್ ಗಳ ಪೈಕಿ ಒಂದು ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಆ ಬೆಂಕಿ ಹತ್ತಿರಲ್ಲಿದ್ದ ಇತರ ಬೋಟ್ ಗಳಿಗೂ ಹಬ್ಬಿದ್ದು, ಮೂರು ಬೋಟ್ ಗಳು ಬೆಂಕಿಗಾಹುತಿಯಾಗಿದೆ. ಪರಿಣಾಮ ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.