ಉಡುಪಿ ಜಿಲ್ಲೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ- 2 ಲಕ್ಷಕ್ಕೂ ಅಧಿಕ ಮಂದಿ ಭಾಗಿ
ಉಡುಪಿ ಅ.28: 67ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಹೆಚ್ಚಿನ ಸಂಭ್ರಮ ಉತ್ಸಾಹದಿಂದ ಅತ್ಯಂತ ವಿಶಿಷ್ಠವಾಗಿ ಆಚರಿಸುವ ನಿಟ್ಟಿನಲ್ಲಿ ಇಂದು ರಾಜ್ಯದಾದ್ಯಂತ ಏಕಕಾಲದಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠಗಾಯನ ಕಾರ್ಯಕ್ರಮವು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ನಡೆಯಿತು.
ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಆಯ್ದ 6 ಕನ್ನಡ ಗೀತೆಗಳನ್ನು ಏಕ ಕಾಲದಲ್ಲಿ, ಏಕ ಕಂಠದಲ್ಲಿ ಹಾಡಲಾಯಿತು. ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂನತ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಗಾಯನ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳಸುವ ಕುರಿತು ಸಂಕಲ್ಪ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಮಲ್ಪೆಯ ಸಮುದ್ರ ಮಧ್ಯದಲ್ಲಿ ಸುಮಾರು 140 ಕ್ಕೂ ಅಧಿಕ ಬೋಟು ಗಳಲ್ಲಿ 3000 ಕ್ಕೂ ಅಧಿಕ ಮೀನುಗಾರರು ಕನ್ನಡ ಬಾವುಟಗಳನ್ನು ಅಳವಡಿಸಿದ್ದ ಪರ್ಸಿನ್ ಬೋಟುಗಳಲ್ಲಿ ತೆರಳಿ ಕನ್ನಡ ಗೀತೆಗಳ ಗಾಯನ ಕಾಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಉಡುಪಿ ಮತ್ತು ದ.ಕನ್ನಡ ಮೀನು ಮಾರಾಟ ಫೆಡರೇಷನ್ ಆಧ್ಯಕ್ಷ ಯಶ್ಪಾಲ್ ಸುವರ್ಣ, ವಾರ್ತಾಧಿಕಾರಿ ಮಂಜುನಾಥ್.ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು , ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಕನ್ನಡ ಬಾವುಟಗಳಿಂದ ಅಲಂಕರಿಸಿದ ಬೋಟ್ ನಲ್ಲಿ ಸಂಗೀತ ಕಲಾವಿದರೊಂದಿಗೆ ಗಾಯನದಲ್ಲಿ ಭಾಗವಹಿಸಿದರು. ಜಿಲ್ಲಾಧಿಕಾರಿಗಳು ಇತರರೊಂದಿಗೆ ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಮಣಿಪಾಲ ಗ್ರೀನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 5000 ಕ್ಕೂ ಮಂದಿ ಡಾಕ್ಟರ್ಗಳು ಮತ್ತು ನಸಿರ್ಂಗ್ ವಿದ್ಯಾರ್ಥಿಗಳು ಬಿಳಿ ಕೋಟ್ ಹಾಗೂ ಸ್ಕೆತೋಸ್ಕೋಪ್ ಧರಿಸಿ ಭಾಗವಹಿಸಿದ್ದು, ಶಾಸಕ ರಘುಪತಿ ಭಟ್, ಮಾಹೆಯ ಸಹ ಕುಲಪತಿ ಹೆಚ್.ಎಸ್. ಬಲ್ಲಾಳ್ ಮತ್ತಿತರರು ಭಾಗವಹಿಸಿದ್ದರು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಬ್ಯಾಂಡ್ ನೊಂದಿಗೆ 5000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಲೀಡ್ ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ 3000 ಮಂದಿ ಕಾರ್ಮಿಕರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಭಾಗವಹಿಸಿದ್ದರು.
ಉಡುಪಿ ನಗರಸಭೆಯಿಂದ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆಯ ಸದಸ್ಯರುಗಳು, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ , ನಗರಸಭೆಯ ಸಿಬ್ಬಂದಿ ಭಾಗವಹಿಸಿದ್ದರು.
ಇದರೊಂದಿಗೆ ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು, ಬೀಡನಗುಡ್ಡೆಯ ಮಹಾತ್ಮಗಾಂಧೀ ಬಯಲು ರಂಗ ಮಂದಿರಲ್ಲಿ ಕಟ್ಟಡ ಕಾರ್ಮಿಕರು, ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಟ್ಟೂರಿನ ಸರ್ಕಾರಿ ರಾಜ್ಯ ಮಹಿಳಾ ನಿಲಯ, ಕಾರ್ಕಳದ ಅತ್ತೂರು ಚರ್ಚ್, ಚತುರ್ಮುಖ ಬಸದಿ, ಗೊಮ್ಮಟಬೆಟ್ಟ,
ಆನೆಕೆರೆ ಬಸದಿ, ವರಂಗ ಬಸದಿ, ಕಾಪು ಜೂನಿಯರ್ ಕಾಲೇಜು ಮೈದಾನ, ಬಂಟಕಲ್ ಇಂಜಿನಿಯರ್ ಕಾಲೇಜು,ಕುಂದಾಪುರ ಜೂನಿಯರ್ ಕಾಲೇಜು ಮೈದಾನ, ಬೈಂದೂರು ಗಾಂಧೀ ಮೈದಾನ,ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಗ್ರಂಥಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಬಸ್ ನಿಲ್ದಾಣ, ಧಾರ್ಮಿಕ ಕೇಂದ್ರಗಳಲ್ಲಿ, ಬ್ಯಾಂಕ್, ಎಲ್.ಐ.ಸಿ ಕಚೇರಿಗಳಲ್ಲಿ ಕೋಟಿ ಕಂಠ ಗಾಯನ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಜನರು ಈ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.