ಪ್ರತಿಭಾ ವಿರುದ್ದ ಅಶ್ಲೀಲ ಪೋಸ್ಟ್ – ನ್ಯಾಯಾಲಯಕ್ಕೆ ಶರಣಾದ ಆರೋಪಿಗೆ ಕಸ್ಟಡಿಗೆ
ಮಂಗಳೂರು, ಅ.28 : ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಕ್ಕೆ ಶರಣಾದ ಆರೋಪಿ ಕೆ. ಆರ್. ಶೆಟ್ಟಿ ಅಡ್ಯಾರ್ ಪದವು ನನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ವಕೀಲರ ಮೂಲಕ ಕೋರ್ಟ್ ಗೆ ಹಾಜರಾಗಿದ್ದ ಆರೋಪಿಯನ್ನು ನ್ಯಾಯಾಲಯ ಒಂದು ದಿನದ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಶ್ಯಾಮ ಸುದರ್ಶನ ಭಟ್ ತಲೆಮರೆಸಿಕೊಂಡಿದ್ದಾನೆ.
ಮಾನಹಾನಿಕಾರಕ ಪೋಸ್ಟ್ ವಿರುದ್ದ ಪ್ರತಿಭಾ ಕುಳಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದ ಬೆನ್ನಲ್ಲೇ, ಆರೋಪಿ ಕೆ. ಆರ್. ಶೆಟ್ಟಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ನಲ್ಲಿ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಟೋಲ್ ಗೇಟ್ ಅನ್ನು ತೆರವುಗೊಳಿಸಬೇಕೆಂದು ಅಕ್ಟೋಬರ್ 18 ರಂದು ಬೃಹತ್ ಹೋರಾಟ ನಡೆದಿತ್ತು. ಈ ವೇಳೆ ಸೂರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯರೂ ಆದ ಪ್ರತಿಭಾ ಕುಳಾಯಿ ವಿರುದ್ಧ ಹೋರಾಟದ ದೃಶ್ಯಾವಳಿ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ಪೋಸ್ಟ್ ಮಾಡಿರುವ ಆರೋಪದ ಮೇಲೆ ದೂರು ದಾಖಲಾಗಿತ್ತು.