ಸುರತ್ಕಲ್ ಟೋಲ್ ಗೇಟ್ ವಿರೋಧ : ಮತ್ತೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ
ಸುರತ್ಕಲ್ ಅ.28 : ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರದ ತೆರವಿಗೆ ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಪ್ರತಿಭಟನೆ ಆರಂಭಗೊಂಡಿದೆ.
ಇಂದು ಬೆಳಗ್ಗೆ 10 ಗಂಟೆಗೆ ಟೋಲ್ ಗೇಟ್ ಎದುರು ಜಮಾಯಿಸಿದ ಹೋರಾಟ ಸಮಿತಿ ಮುಖಂಡರು, ಸದಸ್ಯರು ಧರಣಿ ನಡೆಸುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತಾಡಿದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು, “ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಏಳು ವರ್ಷಗಳಿಂದ ಟೋಲ್ ತೆರವಿಗೆ ದಿನಾಂಕ ಮುಂದೂಡುತ್ತಲೇ ಇದ್ದಾರೆ. ಈಗ ನವೆಂಬರ್ 9 ಗಡುವು ನೀಡಿದ್ದಾರೆ. ಆದರೆ ಅವರನ್ನು ನಂಬುವ ಹಾಗಿಲ್ಲ. ಪ್ರತಿಭಟನೆ ಎದುರಿಸಲು ಜಿಲ್ಲಾಡಳಿತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೆ ಇದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಲ್ಲಿಂದ ಟೋಲ್ ಗೇಟ್ ತೆರವುಗೊಳ್ಳುವ ತನಕ ಹಗಲು ರಾತ್ರಿ ಹೋರಾಟ ಮುಂದುವರಿಯಲಿದೆ” ಎಂದರು.
ಈ ಸಂದರ್ಭದಲ್ಲಿ ಡಿವೈ ಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಜ್, ಮಂಜುಳಾ ನಾಯಕ್, ರಾಘವೇಂದ್ರ ರಾವ್, ಎಂ. ಜಿ ಹೆಗಡೆ, ದಿನೇಶ್ ಹೆಗ್ಡೆ, ಪುರುಷೋತ್ತಮ್ ಚಿತ್ರಾಪುರ, ಮೊಯಿದೀನ್ ಬಾವ, ದಿನೇಶ್ ಕುಂಪಲ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಯಾದವ್ ಶೆಟ್ಟಿ, ವಸಂತ ಆಚಾರಿ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಅನೇಕರು ಧರಣಿಯಲ್ಲಿ ಭಾಗವಹಿಸಿದ್ದಾರೆ.