ಬ್ರಿಟನ್ ಪ್ರಧಾನಿ ರೇಸ್​ನಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್: ಭಾರತೀಯ ಮೂಲದ ರಿಷಿ ಸುನಕ್​ಗೆ ಬೆಂಬಲ

ಬ್ರಿಟನ್ ಅ.24 : ಇಂಗ್ಲೆಂಡ್ ನ ಪ್ರಧಾನಿ ಹುದ್ದೆ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಧಾನಿ ರೇಸ್ ನಿಂದ ಹಿಂದೆ ಸರಿದಿದ್ದು, ಇದು ಬ್ರಿಟನ್ ಮಾಜಿ ಸಚಿವ ರಿಷಿ ಸುನಕ್ ಅವರಿಗೆ ಪ್ರಧಾನಿ ಗಾದಿಗೆ ಏರುವ ಹಾದಿ ಮತ್ತಷ್ಟು ಸುಲಭವಾಗಿಸಿದೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಮಾಜಿ ಸಚಿವ ರಿಷಿ ಸುನಕ್ ಮತ್ತು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇಬ್ಬರೂ ಅರ್ಹತೆ ಗಳಿಸಿದ್ದರು. ಆದರೆ ಅಚ್ಚರಿ ಬೆಳವಣಿಗೆಯಲ್ಲಿ ಬೋರಿಸ್ ಜಾನ್ಸನ್ ಅವರು ಪ್ರಧಾನಿ ಸ್ಥಾನದ ರೇಸ್ ನಿಂದ ಹಿಂದೆ ಸರಿದಿರುವುದು ಮಾತ್ರವಲ್ಲದೆ ರಿಷಿ ಸುನಕ್ ಅವರಿಗೆ ಬೆಂಬಲವನ್ನೂ ಸೂಚಿಸಿದ್ದಾರೆ.

ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವವರಲ್ಲಿ ರಿಷಿ ಸುನಕ್ ಇದೀಗ ಕನ್ಸರ್ವೇಟಿವ್ ಪಕ್ಷದ 100 ಸಂಸದರ ಬೆಂಬಲದೊಂದಿಗೆ ಮೊದಲ ರೇಸ್ ನಲ್ಲಿದ್ದಾರೆ. ಈ ಹಿಂದೆ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಸದ್ಯದ ಬ್ರಿಟನ್ ನ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಸೂಕ್ತ ಅಭ್ಯರ್ಥಿ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ- ಸುಧಾ ಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್ ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಚುನಾಯಿತರಾಗಲು ಒಂದು ಹೆಜ್ಜೆ ಹತ್ತಿರವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.

ಔಪಚಾರಿಕವಾಗಿ ಇನ್ನೂ ತನ್ನ ಉಮೇದುವಾರಿಕೆಯನ್ನು ಘೋಷಿಸದ ಬೋರಿಸ್ ಜಾನ್ಸನ್ ಕೆಲವು ಉನ್ನತ ಮಟ್ಟದ ಕ್ಯಾಬಿನೆಟ್ ಸದಸ್ಯರನ್ನು ಒಳಗೊಂಡಂತೆ ಸುಮಾರು 59 ಟೋರಿ ಸಂಸದರ ಬೆಂಬಲವನ್ನು ಹೊಂದಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದರಿಂದ ಬ್ರಿಟನ್ ನಲ್ಲಿರಾಜಕೀಯ ಕೋಲಾಹಲವೇ ಉಂಟಾಗಿತ್ತು. ಇಂಗ್ಲೆಂಡ್ ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇಂಧನ ದರಗಳ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗೆ ಸುಧಾರಣೆಗಳನ್ನು ತಕ್ಷಣವೇ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದ ಲಿಜ್ ಟ್ರಸ್ ಅವರು ತಮ್ಮ ಪಕ್ಷದ ಸಂಸದರಲ್ಲಿ ಭರವಸೆ ಮೂಡಿಸಿದ್ದರು. ಆದರೆ, ಅವರು ಜಾರಿಗೆ ತಂದ ತೆರಿಗೆ ಕಡಿತ ನೀತಿ ದೇಶದಲ್ಲಿ ಆರ್ಥಿಕ ಕೋಲಾಹಲವನ್ನೇ ಸೃಷ್ಟಿಸಿತು. ತೆರಿಗೆ ಮತ್ತು ಇಂಧನ ಬಿಲ್‍ಗಳಲ್ಲಿ ಕಡಿತ ಮಾಡುವುದು ಇದರ ಉದ್ದೇಶವಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದವು. ಭಾರೀ ಒತ್ತಡದ ನಂತರ ಆ ನೀತಿಯನ್ನು ಹಿಂಪಡೆಯಬೇಕಾಯಿತು. ಇದರಿಂದಲೇ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!