ರಾಯಚೂರು ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ
ರಾಯಚೂರು ಅ.21 : ರಾಜ್ಯದಾದ್ಯಂತ ಸಂಚರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯು ಮಂತ್ರಾಲಯದಿಂದ ರಾಯಚೂರು ಜಿಲ್ಲೆಗೆ ಆಗಮಿಸಿದೆ.
ರಾಯಚೂರು ಜಿಲ್ಲೆ ಪ್ರವೇಶಿಸಿದ ರಾಹುಲ್ ಗಾಂಧಿ ಅವರಿಗೆ ಜಿಲ್ಲೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಸಾರ್ವಜನಿಕರು ಪಾದ ಯಾತ್ರೆಯಲ್ಲಿ ಭಾಗವಹಿಸಿದರು.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿರುವ ಭಾರತ್ ಜೋಡೋ ಪಾದಯಾತ್ರೆ ಅ.23 ರವರೆಗೆ ರಾಯಚೂರು ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ. ತುಂಗಭದ್ರಾ ಸೇತುವೆಯ ಮೂಲಕ ಮುನ್ನಡೆಯಲಿರುವ ಯಾತ್ರೆಯು ಗಿಲ್ಲೆಸುಗೂರು, ಕೆರೆಬುದೂರು, ಯರಗೇರಾ, ರಾಯಚೂರು ನಗರ, ಶಕ್ತಿನಗರ ಮಾರ್ಗದಲ್ಲಿ ಸಂಚರಿಸಲಿದೆ. ಈ ವೇಳೆ ಪಾದಯಾತ್ರೆ ಮಧ್ಯೆ ರೈತರು, ಸ್ಥಳೀಯರ ಜೊತೆಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಜ್ಯದ ಜಿಲ್ಲೆಗಳ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧೀ ಅವರ ಜೊತೆಗೂಡಿ, ರಾಜ್ಯದಾದ್ಯಂತ ಸಂಚರಿಸುವ ಮೂಲಕ ರಾಜ್ಯದ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವಲ್ಲಿ ಕೈಜೋಡಿಸಿದ್ದಾರೆ.