ಸಚಿವರು, ಶಾಸಕರಿಂದ ಕಟ್ಟಡ ಕಾರ್ಮಿಕರ ನಿಧಿಗೆ ಕನ್ನ: ಸಿ.ಡಬ್ಲ್ಯು.ಎಫ್.ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪ
ಉಡುಪಿ ಅ.20 (ಉಡುಪಿ ಟೈಮ್ಸ್ ವರದಿ) : ರಾಜ್ಯದ ಬೊಕ್ಕಸದಲ್ಲಿ ಶೇ.40 ರಷ್ಟು ಹಣವನ್ನು ಭ್ರಷ್ಟಾಚಾರದ ಮೂಲಕ ನುಂಗಿ ನೀರು ಕುಡಿದಿರುವ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕ ನಿಧಿಗೆ ಕನ್ನ ಹಾಕಿದ್ದಾರೆ ಎಂದು ಸಿ.ಡಬ್ಲ್ಯು.ಎಫ್.ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಆರೋಪಿಸಿದ್ದಾರೆ.
ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ 450 ಕೋಟಿ ಹಣವನ್ನು ಸ್ಲಂ ಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ ನೀಡಿರುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಸ್ಲಂ ಬೋರ್ಡ್‍ಗೆ ನೀಡಲಾದ ಹಣವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೂ ಇದೇ ವೇಳೆ ರಾಜ್ಯದ ಬೊಕ್ಕಸದಲ್ಲಿ ಶೇ. 40 ರಷ್ಟು ಹಣವನ್ನು ಭ್ರಷ್ಟಾಚಾರದ ಮೂಲಕ ನುಂಗಿ ನೀರು ಕುಡಿದಿರುವ ಸಚಿವರು, ಶಾಸಕರು ಇದೀಗ ಬಡಕಟ್ಟಡ ಕಾರ್ಮಿಕ ನಿಧಿಗೆ ಕನ್ನ ಹಾಕಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ ಲಕ್ಷಾಂತರ ಕಾರ್ಮಿಕರು ಫಲಾನುಭವಿಗಳಿಗೆ ನೋಂದಣಿಯಾಗಿದ್ದಾರೆ. ಅದರಲ್ಲಿ ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳಿಂದ ಮಂಡಳಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ಆರ್ಥಿಕ ನೆರವು ನೀಡಲು ಕ್ರಮವಹಿಸದ ಮಂಡಳಿ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ವಸತಿ ಸಚಿವ ವಿ. ಸೋಮಣ್ಣ ಹಾಗೂ ಬಿಜೆಪಿ ಸಚಿವರ ಒತ್ತಡಕ್ಕೆ ತಲೆಬಾಗಿ ಕೊಳಚೆ ನಿರ್ಮೂಲನ ಮಂಡಳಿ ಮೂಲಕ ನಿರ್ಮಾಣ ಆಗುತ್ತಿರುವ 21 ಸಾವಿರ ಮನೆಗಳಿಗೆ 433 ಕೋಟಿ ಹಣವನ್ನು ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸುವ 423 ಮನೆಗಳಿಗೆ 8.33 ಕೋಟಿ ಹಣವನ್ನು ಏಜೆನ್ಸಿದಾರರಿಗೆ ವರ್ಗಾಯಿಸಿ, ಲಕ್ಷಾಂತರ ಬಡ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಇದರಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಸಚಿವರು ಹಾಗೂ ಶಾಸಕರುಗಳು ಅಪಾರ ಪ್ರಮಾಣದ ಹಣವನ್ನು ಕಮಿಷನ್ ರೂಪದಲ್ಲಿ ದೋಚಲು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಕಟ್ಟಡ ಕಾರ್ಮಿಕ ಸಂಘದ ಸುರೇಶ್ ಕಲ್ಲಾಗರ, ರೊನಾಲ್ಡ್ ಕ್ವಾಡ್ರಸ್ ಉಪಸ್ಥಿತರಿದ್ದರು.