ಮುಂಬೈನ ಖ್ಯಾತ ಬಿಲ್ಡರ್ ಆತ್ಮಹತ್ಯೆ

ಮುಂಬೈ ಅ.20 : ಡೆತ್ ನೋಟ್ ಬರೆದಿಟ್ಟು ಹೆಸರಾಂತ ರಿಯಲ್ ಎಸ್ಟೇಟ್ ಡೆವಲಪರ್ ಪರಾಸ್ ಪೋರ್ವಾಲ್ ಎಂಬವರು ಮುಂಬೈನ ವಸತಿ ಸಮುಚ್ಛಯದ 23ನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಪರಾಸ್ (57) ಅವರು ಮನೆಯ ಜಿಮ್ ನಿಂದ ಹೊರಗೆ ಬಾಲ್ಕನಿಗೆ ಬಂದು ಕೆಳಕ್ಕೆ ಹಾರಿದ್ದು, “ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ ಮತ್ತು ಯಾರನ್ನೇ ಆಗಲಿ ತನಿಖೆಗೆ ಒಳಪಡಿಸಬೇಕಾಗಿಲ್ಲ” ಎಂದು ಡೆತ್ ನೋಟ್ ಬರೆದು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈನ ಚಿಂಚ್ ಪೊಂಕ್ಲಿ ರೈಲ್ವೆ ನಿಲ್ದಾಣ ಸಮೀಪ ಇರುವ ಶಾಂತಿ ಕಮಲ್ ಹೌಸಿಂಗ್ ಸೊಸೈಟಿಯ 23ನೇ ಮಹಡಿಯಲ್ಲಿರುವ ನಿವಾಸದಲ್ಲಿನ ಜಿಮ್ ನ ಹೊರಭಾಗದ ಬಾಲ್ಕನಿಯಲ್ಲಿ ನಿಂತು ಪರಾಸ್ ಕೆಳಕ್ಕೆ ಹಾರಿರುವುದಾಗಿ ಅಧಿಕಾರಿಗಳು  ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಸಾವಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!