ಹಿರಿಯ ದೈವ ನರ್ತಕರಿಗೆ ಮಾಸಾಶನ : ಸರಕಾರದಿಂದ ಸಿಹಿಸುದ್ದಿ
ಉಡುಪಿ ಅ.20 : ಭೂತಾರಾಧನೆ ಮಾಡುವ ಹಿರಿಯ ದೈವ ನರ್ತಕರಿಗೆ ಸರಕಾರ ಸಿಹಿ ಸುದ್ದಿ ನೀಡಿದ್ದು, 60 ವರ್ಷ ಮೇಲ್ಪಟ್ಟ ದೈವ ನರ್ತನ ಮಾಡುವವರಿಗೆ ಪ್ರತೀ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲು ಸರಕಾರ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು, ಜಾನಪದ ಅಕಾಡೆಮಿಯಿಂದ ಮಾಸಾಶನ ನೀಡಲು ತೀರ್ಮಾನಿಸಲಾಗಿದೆ. ದೈವಾರಾಧನೆ ತುಳು ನಾಡಿನ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ದೈವ ನರ್ತಕರಿಗೆ ಮಾಸಾಶನ ನೀಡಲಾಗುವುದು. ಇದಕ್ಕಾಗಿ 60 ವರ್ಷ ಮೇಲ್ಪಟ್ಟವರು ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸಿದವರಿಗೆ ಪ್ರತೀ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಅವರ ಆಯ್ಕೆ ಬಗ್ಗೆ ಯಾವುದೇ ವಿವಾದವಿಲ್ಲ. ಆದ್ರೆ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಆಯ್ಕೆ ನಡೆದಿದೆ. ಈ ಚುನಾವಣಾ ಪ್ರಕ್ರಿಯೆಯನ್ನು ಶಶಿ ತರೂರ್ ಪ್ರಶ್ನೆ ಮಾಡಿದ್ದಾರೆ ಎಂದಿದ್ದಾರೆ. ಹಾಗೂ 75 ವರ್ಷದ ಬಳಿಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. ಆದರೆ ಬಿಜೆಪಿಯಲ್ಲಿ ಪ್ರತೀ ಮೂರು ವರ್ಷಕ್ಕೆ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಪ್ರಧಾನಿ ಸ್ಥಾನದವರೆಗೂ ಆಂತರಿಕ ಪ್ರಜಾಪ್ರಭುತ್ವದಲ್ಲೇ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
ರಾಮಮಂದಿರ ಸ್ಫೋಟಕ್ಕೆ ಪಿ.ಎಫ್.ಐ ಸಂಚು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಬಿಡಲ್ಲ. ನಮ್ಮದು ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರವಾಗಿಯೇ ಇನ್ನಷ್ಟು ಗಟ್ಟಿ ಮಾಡ್ತೇವೆ. ತುಷ್ಟೀಕರಣದ ರಾಜಕಾರಣಕ್ಕೆ ಪಿ.ಎಫ್.ಐ ನ್ನು ದೇಶದಲ್ಲಿ ಬೆಂಬಲಿಸಲಾಗ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂಥ ಸಂಘಟನೆಗಳನ್ನು ವಿರೋಧಿಸುವವರೆಗೂ ಇಂಥ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ. ಪಿ.ಎಫ್.ಐ ನಿಷೇಧ ಮಾಡಿದ ಬಳಿಕ ಹಲವು ಸಂಗತಿಗಳು ಬೆಳಕಿಗೆ ಬರ್ತಿವೆ. ಈ ಸಂಘಟನೆ ಭಾರತವನ್ನು ಇಸ್ಲಾಮೀಕರಣ ಮಾಡುವ ದೊಡ್ಡ ಸಂಚು ಮಾಡ್ತಿತ್ತು. ಇವತ್ತು ರಾಮಮಂದಿರವನ್ನು ಧ್ವಂಸ ಮಾಡುವ ಅಜೆಂಡಾ ಇಟ್ಟುಕ್ಕೊಂಡಿದೆ. ಈ ಅಜೆಂಡಾದ ಕಾರ್ಯತಂತ್ರವನ್ನು ಈಗ ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಈ ಇಡೀ ತನಿಖಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ ಎಂದರು.