ಪರೇಶ್ ಮೇಸ್ತ ಸಾಯುವ ಮುನ್ನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ: ಸಿಬಿಐ ವರದಿಯಲ್ಲಿ ಉಲ್ಲೇಖ

ಕಾರವಾರ ಅ.19 : ಹೊನ್ನಾವರದ ಪರೇಶ್ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಪರೇಶ್ ಮೇಸ್ತ ಸಾವಿನ ಸಂದರ್ಭದಲ್ಲಿ ಹಾಗೂ ಆ ಬಳಿಕ ಅವರನ್ನು ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ತಿಳಿಸಲಾಗಿತ್ತಾದರೂ ಇದೀಗ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಪರೇಶ್ ಮೇಸ್ತ ಅವರು ಸಾಯುವ ಮೊದಲು ಕುಮಟಾದಲ್ಲಿ ಸಿದ್ದ ರಾಮಯ್ಯ ಅವರು ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ 25 ಕಿಮೀ ಪ್ರಯಾಣಿಸಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದಿದ್ದ ಪರೇಶ್ ಮೇಸ್ತ ನಂತರ ಸ್ನೇಹಿತರ ಭೇಟಿಗೆಂದು ಹೊರಗೆ ಹೋಗಿದ್ದರು ಎಂದು ಉಲ್ಲೇಖಿಸಲಾಗಿದೆ.

ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ವರದಿಯು ಇದೀಗ ಲಭ್ಯವಾಗಿದ್ದು, ವರದಿಯಲ್ಲಿ ಪರೇಶ ಮೇಸ್ತಾ ಒಡನಾಡಿಗಳು ಮತ್ತು ಸ್ನೇಹಿತರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳೂ ಸೇರಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ಪೂರಕ ಪುರಾವೆಯಾಗಿ ಸಲ್ಲಿಸಲಾಗಿದೆ. ‘ಪರೇಶ ಮೇಸ್ತ ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ಸಹ ತಂದೆ ಒಪ್ಪಿಗೆ ಪಡೆದಿದ್ದ. ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬಂದಿದ್ದ. ಆಗಾಗ ಸ್ನೇಹಿತರ ಮನೆಯಲ್ಲಿ ಇರುತ್ತಿದ್ದ’ ಎಂದು ವರದಿಯಲ್ಲಿ ಸಿಬಿಐ ತಿಳಿಸಿದೆ.

ಸಿಬಿಐ ಅಧಿಕಾರಿಗಳು ಅ 18ರಂದು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವಿಸ್ತೃತ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಮೇಸ್ತನನ್ನು ಕೊಲೆ ಮಡಿರುವ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು ಎಂದು ಉಲ್ಲೇಖಿಸಲಾಗಿದೆ. ಈ ಹಿಂದೆ ಸಿಬಿಐ ಅಧಿಕಾರಿಗಳು ಅ. 3 ರಂದು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ಮೊದಲ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಪರೇಶ್ ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!