ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಾಚರಣೆ: ಹಲವರು ಪೊಲೀಸ್ ವಶಕ್ಕೆ

ಮಂಗಳೂರು, ಅ.18 : ವ್ಯಾಪಕ ವಿರೋಧದ ನಡುವೆಯೂ ಅನಧಿಕೃತವಾಗಿ ಕಾರ್ಯಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕರು ಇಂದು ಬೆಳಗ್ಗೆ ಟೋಲ್ ಗೇಟ್ ಎದುರು ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

ಇಂದು ಬೆಳಿಗ್ಗೆಯಿಂದ ಟೋಲ್ ಗೇಟ್ ಎದುರು ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ, ಸಂಸದ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವೇಳೆ ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಟೋಲ್ ತೆಗೆಯುವುದ್ದನ್ನು ರದ್ದು ಮಾಡುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಇಂದು ಟೋಲ್ ಪಡೆಯುವುದು ರದ್ದಾಗಲೇಬೇಕು. ಟೋಲ್ ಅಧಿಕೃತ ರದ್ದಿನ ಬಗ್ಗೆ ದಿನಾಂಕ ಘೋಷಿಸಬೇಕು ಎಂದಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ಅನ್ನು ಅಕ್ಟೋಬರ್ 18 ರೊಳಗೆ ರದ್ದುಪಡಿಸುವಂತೆ ಸೆ.13 ರಂದು ಸರ್ಕಾರಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಗಡುವು ನೀಡಿತ್ತು, ಸರ್ಕಾರ ತಮ್ಮ ಮನವಿಗೆ ಮಣಿಯದಿದ್ದರೆ ಅಕ್ಟೋಬರ್ 18 ರಂದು ಟೋಲ್ ಗೇಟ್‍ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಲಾಗಿತ್ತು. ಆದರೆ ಈ ವರೆಗೂ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ಪ್ರತಿಭಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ ಕೂಡ ಭೇಟಿ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಅನೇಕ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ.

ಈ ನಡುವೆ ಟೋಲ್ ಗೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದರು.
ಸಂದರ್ಭ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಪೊಲೀಸರು ಹೋರಾಟ ಸಮೀತಿಯ ಮುಖಂಡರನ್ನು ಮತ್ತು ಪ್ರತಿಭಟನಾ ಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!