ಅ.20 ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಾಥ- ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್
ಉಡುಪಿ ಅ.17 (ಉಡುಪಿ ಟೈಮ್ಸ್ ವರದಿ) : ದೇಶದೆಲ್ಲೆಡೆ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿಆಫ್ ಇಂಡಿಯಾದ ವತಿಯಿಂದ ಕೈಗೊಂಡಿರುವ ರಾಷ್ಟ್ರೀಯ ಮಟ್ಟದಲ್ಲಿ “ದೇಶ್ ಮೆ ಬಡಾ ಬವಾಲ್ – ರೋಟಿ, ರೋಜಿ ಕಾ ಸವಾಲ್” ಎಂಬ ಶೀರ್ಷಿಕೆಯ ಅಭಿಯಾನದ ಜನಾಗೃತಿ ಜಾಥವು ಕಲಬುರುಗಿಯಿಂದ ಹೊರಟು ಅ.20 ರಂದು ಉಡುಪಿಗೆ ಬರಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರು ಅಬ್ದುಲ್ ಅಝೀಝ್ ಉದ್ಯಾವರ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಅಭಿಯಾನದ ಮೂಲಕ ದೇಶದಾದ್ಯಂತ ವಿವಿಧ ರೀತಿಯಲ್ಲಿ ಹೋರಾಟಗಳನ್ನು ಸಂಘಟಿಸಿ ಜನರ ಸಂಕಷ್ಟವನ್ನು ಸರಕಾರಕ್ಕೆ ತಿಳಿಸುವ ಪ್ರಯತ್ನ ಸಾಗುತ್ತಿದೆ. ಈ ಅಭಿಯಾನದ ಪ್ರಯುಕ್ತ ಪಕ್ಷದ ರಾಜ್ಯ ನಾಯಕರು ರಾಜ್ಯಾದ್ಯಂತ ಕಾರವಾನ ಹಮ್ಮಿಕೊಂಡಿದ್ದು ಕಲಬುರುಗಿಯಿಂದ ಹೊರಟ ಜಾಥ ಅ.20 ರಂದು ಉಡುಪಿಗೆ ಆಗಮಿಸಲಿದೆ. ಈ ಹಿನ್ನಲೆಯಲ್ಲಿ ಅ.20 ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಮರುದಿನ ಮಂಗಳೂರಿನಲ್ಲಿ ಜಾಥಾದ ಸಮಾರೋಪಕಾರ್ಯಕ್ರಮ ನಡೆಯಲಿದ್ದು, ಈ ಸಭೆಯಲ್ಲಿರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಗವಹಿಸುವ ಪಕ್ಷದ ನಾಯಕರುಗಳು ದೇಶ ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಮುಕ್ತಿಹೊಂದಲು ಮತ್ತು ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಸರಕಾರ ಕೈಗೊಳ್ಳಬಹುದಾದ ಮಾರ್ಗೋಪಾಯ ಮತ್ತು ಬೇಡಿಕೆಗಳನ್ನು ವಿವರಿಸಲಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತ ದೇಶವನ್ನು ದಿವಾಳಿತನದತ್ತ ಕೊಂಡೊಯ್ಯುತ್ತಿರುವ ಜನ ವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರಕಾರ ಇಂಟರ್ನೆಟ್ ಬಳಕೆದಾರರ ಅಂಕಿ ಅಂಶದ ಆಧಾರದಲ್ಲಿ ಅಭಿವೃದ್ಧಿಯ ಮಾನದಂಡವೆಂದು ಹೇಳಲು ಹೊರಟಿದೆ. ಇದು ದೇಶದ ಒಟ್ಟು ಅಭಿವೃದ್ದಿಯ ಭಾಗವಾಗಲು ಸಾಧ್ಯವೇ ಇಲ್ಲ. ದೇಶದಲ್ಲಿ ಮೂಲ ಸೌಕರ್ಯ ವಂಚಿತ ಒಟ್ಟು 122 ಜಿಲ್ಲೆಗಳು ಅತೀ ಹಿಂದುಳಿದ ಜಿಲ್ಲೆಗಳೆಂದು ವರದಿ ಪ್ರಕಟವಾಗಿರುವುದು ದೇಶದ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲುತ್ತದೆ. ದೇಶದ 30 ಕೋಟಿ (22.5%) ಜನರು ಬಡತನರೇಖೆಗಿಂತ ಕೆಳಗಿದ್ದಾರೆ. 2020 ರ ಅಂಕಿ ಅಂಶದ ಪ್ರಕಾರ ಹೆಚ್ಚುವರಿಯಾಗಿ ಐದು ಕೋಟಿ ಜನರು ಬಡತನ ರೇಖೆಯಿಂದ ಕೆಳಗಿನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ವಿಶ್ವ ಹಸಿವು ಸೂಚ್ಯಂಕ 2022 ಪ್ರಕಾರ ಭಾರತ 121 ದೇಶಗಳ ಪಟ್ಟಿಯಲ್ಲಿ 107 ನೇ ಸ್ಥಾನದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ. ಅಪೌಷ್ಟಿಕಾಂಶದದರದಲ್ಲಿ ನಮ್ಮದೇಶ 1:3 ಅನುಪಾತದಲ್ಲಿದೆ. ನಿರುದ್ಯೋಗ ಮೀತಿ ಮೀರಿದ್ದು ಸರಕಾರಕಾರ್ಮಿಕ ಅಂಕಿ ಅಂಶ ವರದಿಯನ್ನು ಬಿಡುಗಡೆಗೊಳಿಸುತ್ತಿಲ್ಲ. ವಲಸೆ ಕಾರ್ಮಿಕರಿಗೆ ಕೆಲಸ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಆತ್ಮಹತ್ಯೆಗಳು ಹೆಚ್ಚಾಗಿದೆ. ಸಿ.ಎಮ್.ಐ ವರದಿಯ ಪ್ರಕಾರ ನಿರುದ್ಯೋಗದರ 7.6% ದ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಹಾಗೂ ಯುವಜನರಲ್ಲಿ ಪ್ರತಿಭೆ, ಸಾಮಾಥ್ರ್ಯದ ಹೊರತಾಗಿಯೂ ಅವರಿಗೆ ಉದ್ಯೋಗ ಲಭ್ಯವಾಗದಿರುವುದು ಆತಂಕಕಾರಿ ಸಂಗತಿ. ರೈಲ್ವೆ, ಶಿಕ್ಷಣ ಇಲಾಖೆ, ಸೇವಾ ಕ್ಷೇತ್ರಗಳಲ್ಲಿ ಖಾಲಿ ಹುದ್ದೆಗಳು ಲಭ್ಯವಿದ್ದರೂ ಭರ್ತಿ ಮಾಡುವಗೋಜಿಗೆ ಸರಕಾರ ಹೋಗದೆ ನಿರ್ಲಕ್ಷ್ಯಧೋರಣೆ ಮುಂದುವರಿಸಿದೆ. ಇದರಿಂದ ದೇಶದ ಯುವ ಸಂಪತ್ತು ನಷ್ಟವಾಗುತ್ತಿದ್ದು ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2022 ರ ಹೊತ್ತಿಗೆ ಭಾರತದ ಅರ್ಥಿಕತೆಯನ್ನು ಐದು ಟ್ರಿಲಿಯನ್ ಪ್ರಗತಿ ಸಾಧಿಸುವ, ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಮತ್ತು ರೈತರಿಗೆ ದ್ವಿಗುಣ ಆದಾಯ ನೀಡುವ ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಮತ ಪಡೆದು ಈಗ ಆಶ್ವಾಸನೆಗಳನ್ನು ಈಡೇರಿಸದೆ ಕೊಟ್ಟ ಆಶ್ವಾಸನೆಗಳಿಗೆ ವಿರುದ್ಧವಾಗಿ ಈ ದೇಶದ ಅರ್ಥಿಕ, ಸಾಮಾಜಿಕ ವ್ಯವಸ್ಥೆ ಅತ್ಯಂತ ಕಳವಳಕಾರಿ ಹಂತಕ್ಕೆ ಬಂದು ಮುಟ್ಟಿದೆ. ಬಂಡವಾಳ ಶಾಹಿಗಳಿಗೆ ಮರು ಪಾವತಿಸಲು ಸಾಧ್ಯವಾಗದಷ್ಟು ಸಾಲ ನೀಡಿ ಅದರೊಟ್ಟಿಗೆ ತೆರಿಗೆ ವಿನಾಯಿತಿ ನೀಡಿ ಸಣ್ಣ ಉದ್ಧಿಮೆದಾರರಿಗೆ ಸಾಲವೂ ನೀಡದೆ, ಹೆಚ್ಚುವರಿ ತೆರಿಗೆ ವಿಧಿಸಿ ಸಾವಿರಾರು ಸಣ್ಣ ಉದ್ದಿಮೆಗಳು ಮುಚ್ಚಲ್ಪಟ್ಟಿರುವುದು ಜನ ವಿರೋಧಿ ನೀತಿ ಮತ್ತು ಬಂಡವಾಳ ಶಾಹಿಗಳ ಪರವಾದ ಧೋರಣೆಗೆ ಸಾಕ್ಷಿಯಾಗಿದೆ ಎಂದರು.
ಇದೇ ವೇಳೆ ಅವರು ಉಜ್ವಲ ಯೋಜನೆಯಡಿಯಲ್ಲಿ ಬಡವರಿಗೆ ಸರಕಾರ ನೀಡಿದ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ರೀ ಫಿಲ್ ಮಾಡಲು ಸಾಧ್ಯವಾಗದೇ, ಸರಕಾರ ಅನುದಾನವೂ ನೀಡದೆ ಯೋಜನೆ ವಿಫಲಗೊಂಡಿದೆ. ಪೆಟ್ರೋಲ್, ಡಿಸೇಲ್’ಗಳ ಬೆಲೆ ಅತೀ ಹೆಚ್ಚಾಗಿದ್ದು ಇದು ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣ. ಅದರೊಂದಿಗೆ ಡಾಲರ್‍ನೆದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದು ಹಣದುಬ್ಬರಕ್ಕೆ ಕಾರಣವಾಗಿದೆ. ರಫ್ತು ಕುಸಿದು ಆಮದು ಹೆಚ್ಚಾಗಿ ರೂಪಾಯಿ ಅಪಮೌಲ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ಅಲ್ಲದೆ ಧಾರ್ಮಿಕ ಉನ್ಮಾದ ಸೃಷ್ಟಿಸಿ ಜನರ ಗಮನ ಬೇರೆಡೆ ಸೆಳೆದು ಸರಕಾರದ ವೈಫಲ್ಯವನ್ನು ಮರೆಮಾಚಿ ಬಂಡವಾಳ ಶಾಹಿಗಳನ್ನು ಪೋಷಿಸುತ್ತ ತನ್ನ ಅಧಿಕಾರವನ್ನು ಕಾಪಾಡಿಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ವಿರೋಧ ಪಕ್ಷಗಳು ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಸೋಲುತ್ತಿದೆ. ಇಂತಹ ಸಂದರ್ಭದಲ್ಲಿ ಜನಪರವಾದ ಹೋರಾಟದ ಸಂಘಟಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು.
ಇನ್ನು ಈ ವೇಳೆ ಅವರು ಕೆಲವೊಂದು ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು., ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ತೆ (ಸ್ಟೈಪೆಂಡ್) ನೀಡಬೇಕು., ಸಂವಿಧಾನದ ಪರಿಚ್ಚೇದ 21ರ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಮೂಲಭೂತ ಹಕ್ಕನಾಗಿ ಮಾಡಬೇಕು., ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿ ಯನ್ನು ಹಿಂಪಡೆಯಬೇಕು., ಬಡವರಿಗೆ ಅವರ ಖರೀದಿ ಸಾಮಥ್ರ್ಯವನ್ನು ಸಕ್ರೀಯಗೊಳಿಸಲು ಹಣ ನೀಡಬೇಕು., ಎಲ್ಲಾ ಬಿಪಿಎಲ್‍ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿರಿಫಿಲ್ ಸಿಲಿಂಡರ್‍ಗಳನ್ಮು ನೀಡಬೇಕು., ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನರೋಜ್ ಗಾರ್ ಯೋಜನೆ ಮುಂದುವರಿಸಬೇಕು., ಮನ್ ರೇಗಾ ಯೋಜನೆಯನ್ನು ನಗರದ ಬಡವರಿಗೂ ವಿಸ್ತರಿಸಬೇಕು ಮತ್ತು ವೇತನವನ್ನು 500/- ರೂ ಗೆ ಹೆಚ್ಚಿಸಬೇಕು, ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು., ಆಹಾರ ಭದ್ರತಾಕಾಯ್ದೆ ಮತ್ತುಅಗತ್ಯ ಸರಕುಗಳ ತಿದ್ದುಪಡಿಕಾಯ್ದೆ ಸರಿಯಾದರೀತಿಯಲ್ಲಿ ಅನುಷ್ಠಾನಗೊಳಿಸಬೇಕು., ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯಬೇಕು ಅದನ್ನು ಜಿಎಸ್‍ಟಿ ವ್ಯಾಪ್ತಿಯಲ್ಲಿ ತರಬೇಕು., ಕಾಳಸಂತೆ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು., ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಗಳು ನೀಡಬೇಕು., ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು., ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಪ್ರೋತ್ಸಾಹಿಸಿ ಸೂಕ್ತ ನೆರವು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಉಪಾಧ್ಯಕ್ಷರು ವಿಜಯ್ ಮತ್ತು ಶಹಜಹಾನ್ ತೋನ್ಸೆ, ಜಿಲ್ಲಾ ಸಮಿತಿಯ ಸದಸ್ಯರಾದ ಅನ್ಚರ್ ಅಲಿ ಕಾಪು ಮತ್ತು ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.