ಸುರತ್ಕಲ್ ಟೋಲ್ ತೆರವಿಗೆ ಇನ್ನೂ 15 ದಿನ ಅವಕಾಶ ಕೇಳಿರುವ ಅಧಿಕಾರಿಗಳು- ನಳಿನ್

ಮಂಗಳೂರು ಅ.17 : ಸುರತ್ಕಲ್ ಎನ್‍ಐಟಿಕೆ ಬಳಿಯ ಟೋಲ್‍ಗೇಟ್ ತೆರವಿಗೆ ಮತ್ತೆ 15 ದಿನಗಳ ಕಾಲಾವಕಾಶ ಕೋರಿ ಎನ್‍ಎಚ್‍ಐಎ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ, ಸುರತ್ಕಲ್ ಟೋಲ್ ಕೇಂದ್ರದ ತೆರವಿಗಾಗಿ ಕೆಲವು ಸಭೆಗಳನ್ನು ನಡೆಸಲಾಗಿದೆ. ಈ ಟೋಲ್ ಕೇಂದ್ರದಲ್ಲಿ ಎನ್‍ಎಂಪಿಟಿ, ನವಯುಗ ಕಂಪೆನಿ ಒಳಗೊಂಡಿದ್ದು ಕೆಲವೊಂದು ತಾಂತ್ರಿಕ ಕಾರಣಕ್ಕೆ ಸುರತ್ಕಲ್ ಟೋಲ್ ಗೇಟ್ ರದ್ದತಿ ವಿಳಂಬವಾಗುತ್ತಿದೆ. ಈ ಟೋಲ್ ತೆರವಿನ ಬಳಿಕ ಮುಂದಕ್ಕೆ ರಸ್ತೆ ನಿರ್ವಹಣೆಯ ಪ್ರಶ್ನೆಯೂ ಒಳಗೊಂಡಿದೆ. ಇದೆಲ್ಲದಕ್ಕೆ ಪರಿಹಾರ ಕಂಡುಕೊಂಡು 15 ದಿನಗಳಲ್ಲಿ ಟೋಲ್ ಗೇಟ್ ರದ್ದತಿ ವಿಚಾರ ತಾರ್ಕಿಕ ಅಂತ್ಯ ಕಾಣಲಿದೆ. ಟೋಲ್ ಗೇಟ್ ತೆರವು ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ, ರಾಜಕೀಯೇತರ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದರು.

ಈ ವಿಚಾರವಾಗಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಲೋಕಸಭೆಯಲ್ಲಿ ಟೋಲ್ ಗೇಟ್ ತೆರವು ಬಗ್ಗೆ ಪ್ರಸ್ತಾವ ಮಾಡಿದ್ದರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಇತ್ತೀಚೆಗೆ ಸಭೆ ನಡೆಸಿದಾಗಲೂ ಟೋಲ್‍ಗೇಟ್ ರದ್ದತಿಗೆ 15 ದಿನಗಳ ಕಾಲಾವಕಾಶದ ಬಗ್ಗೆ ಎನ್‍ಎಚ್‍ಐಎ ಅಧಿಕಾರಿಗಳು ಕೋರಿದ್ದರು. ಸಹಾಯಕ ಕಮಿಷನರ್ ನೇತೃತ್ವದಲ್ಲಿ ಟೋಲ್ ಹೋರಾಟಗಾರರ ಸಭೆ ನಡೆಸಿ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಸುರತ್ಕಲ್ ನಲ್ಲಿ ಟೋಲ್‍ಗೇಟ್ ಅನ್ನು ಯುಪಿಎ ಅವಧಿಯಲ್ಲಿ ಆಸ್ಕರ್ ಫೆನಾರ್ಂಡಿಸ್ ಹೆದ್ದಾರಿ ಸಚಿವರಾಗಿದ್ದಾಗ ಸ್ಥಾಪಿಸಲಾಗಿದೆ. ನಿಗದಿತ ಇಂತಿಷ್ಟು ಕಿ.ಮೀ. ಅಂತರದಲ್ಲಿ ಟೋಲ್‍ಗೇಟ್ ಸ್ಥಾಪಿಸಬೇಕು ಎಂಬ ನಿಯಮದ ಕಾರಣ ಈಗ ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಹೋರಾಟದಲ್ಲಿ ರಾಜಕೀಯ ಪ್ರವೇಶವಾದರೆ ಬಿಜೆಪಿ ಕೂಡ ಯುಪಿಎ ಅವಧಿಯಲ್ಲಿ ಟೋಲ್ ಗೇಟ್ ಸ್ಥಾಪಿಸಿದ ವಿಷಯ ಪ್ರಸ್ತಾವಿಸಬೇಕಾಗುತ್ತದೆ. ಟೋಲ್‍ಗೇಟ್ ರದ್ದತಿ ವಿಚಾರದ ಹೋರಾಟದಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದರು.

ಇನ್ನು ಮಂಗಳೂರು ಪೊಲೀಸರು ಟೋಲ್‍ಗೇಟ್ ಹೋರಾಟಗಾರರಿಗೆ ಶನಿವಾರ ರಾತ್ರಿ ಅವರ ಮನೆಗಳಿಗೆ ತೆರಳಿ ನೋಟಿಸ್ ನೀಡಿರುವ ವಿಚಾರ ಈಗಷ್ಟೇ ಗಮನಕ್ಕೆ ಬಂದಿದೆ. ಪೊಲೀಸರ ಕ್ರಮ ಸರಿಯಲ್ಲ, ರಾತ್ರಿ ತೆರಳಿ ನೋಟಿಸ್ ನೀಡುವಂತೆ ನಾನು ಅಥವಾ ಶಾಸಕರ್ಯಾರೂ ಸೂಚನೆ ನೀಡಿಲ್ಲ. ನೋಟಿಸ್ ಬದಲಿಗೆ ಅವರ ಜತೆ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾಗಿ ಅವರು ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!