ದೀಪಾವಳಿಗೆ ಮುಂಬೈ – ಮಂಗಳೂರು ವಿಶೇಷ ರೈಲು ಸಂಚಾರ: ಕೇಂದ್ರ ರೈಲ್ವೆ
ನವದೆಹಲಿ, ಅ.17 : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣ ನೀಡುವ ಉದ್ದೇಶದಿಂದ ಮೂರು ವಿಶೇಷ ರೈಲು ಸೇವೆಗಳನ್ನು ಸೆಂಟ್ರಲ್ ರೈಲ್ವೆ ವತಿಯಿಂದ ಪ್ರಾರಂಭಿಸಲಾಗಿದೆ.
ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದು, ಹಬ್ಬದ ಸಮಯದಲ್ಲಿ ಸೇವೆ ನೀಡುವ ಈ ಮೂರು ವಿಶೇಷ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ತಿಳಿಸಲಾಗಿದೆ.
01185 ಗಾಡಿ ಸಂಖ್ಯೆಯ ವಿಶೇಷ ರೈಲು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ಅಕ್ಟೋಬರ್ 21 ರಿಂದ ನವೆಂಬರ್ 11 ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15 ಕ್ಕೆ ಹೊರಡುತ್ತದೆ. ಒಟ್ಟು ನಾಲ್ಕು ಟ್ರಿಪ್‍ಗಳು ಇದ್ದು, ಮುಂಬೈನಿಂದ ರಾತ್ರಿ 10:15 ಕ್ಕೆ ಹೊರಟು ಮರುದಿನ ಸಂಜೆ 5:05 ಕ್ಕೆ ಮಂಗಳೂರು ಜಂಕ್ಷನ್‍ಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು 01186 ಗಾಡಿ ಸಂಖ್ಯೆಯ ವಿಶೇಷ ರೈಲು ಮಂಗಳೂರು ಜಂಕ್ಷನ್‍ನಿಂದ ಅಕ್ಟೋಬರ್ 22 ರಿಂದ ನವೆಂಬರ್ 21 ರವರೆಗೆ ಪ್ರತಿ ಶನಿವಾರ ಸಂಜೆ 6:45 ಕ್ಕೆ ಹೊರಡುತ್ತದೆ. ಇದು ನಾಲ್ಕು ಟ್ರಿಪ್‍ಗಳಿದ್ದು ಮಂಗಳೂರಿನಿಂದ ಸಂಜೆ 6:45 ಕ್ಕೆ ಹೊರಟು ಮರುದಿನ ಬೆಳಗ್ಗೆ 11.45 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್‍ಗೆ ಆಗಮಿಸಲಿದೆ. ಹಾಗೂ ಮುಂಬೈ-ಮಂಗಳೂರು ವಿಶೇಷ ರೈಲು ನಿಲುಗಡೆ ವಿವರ 01185 ಮತ್ತು 01186 ವಿಶೇಷ ರೈಲುಗಳು ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಉಡುಪಿ ಕುಂದಾಪುರ, ಮೂಲ್ಕಿ ಮತ್ತು ಸುರತ್ಕಲ್ ರೈಲು ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ ಎಂದು ತಿಳಿದು ಬಂದಿದೆ.