ಪರೇಶ್ ಮೇಸ್ತಾ ಸಾವಿನ ಮರು ತನಿಖೆಗೆ ಹೆಚ್ಚಿದ ಒತ್ತಡ
ಉತ್ತರ ಕನ್ನಡ, ಅ.17: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದ ಬೆನ್ನಲ್ಲೇ ಇದೀಗ ಈ ಪ್ರಕರಣದ ಮರುತನಿಖೆಗೆ ಒತ್ತಡ ಹೆಚ್ಚಾಗಿದೆ.
ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿತ್ತು. ಆದರೆ ಸಿಬಿಐ ವರದಿಗೆ ಪರೇಶ್ ಮೆಸ್ತಾ ತಂದೆ ಕಮಲಾಕರ ಮೆಸ್ತಾ ಕೂಡಾ ಅಸಮಾಧಾನ ವ್ಯಕ್ತಪಡಿಸಿ, ಕೇಸ್ ನ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಮರು ತನಿಖೆಗೆ ನೀಡುವುದಾಗಿ ಪರೇಶ್ ಮೆಸ್ತಾ ಕುಟುಂಬಕ್ಕೆ ಬಿಜೆಪಿ ನಾಯಕರು ಭರವಸೆ ನೀಡಿದ್ರು. ಆದ್ರೆ ಕೊಟ್ಟ ಭರವಸೆ ಇನ್ನು ಹಾಗೆಯೇ ಉಳಿದುಕೊಂಡಿದೆ.
ಸಿಬಿಐ ವರದಿ ಬಂದು ಈಗಾಗಲೇ ಎರಡು ವಾರಕ್ಕೂ ಹೆಚ್ಚು ಕಾಲವಾಗಿದ್ದು, ಮರು ತನಿಖೆ ಆದೇಶ ನೀಡದೇ ಸರ್ಕಾರ ಸೈಲೆಂಟ್ ಆಗಿದೆ. ಹೀಗಾಗಿ ಮತ್ತೆ ಕೇಸ್ ರೀ ಓಪನ್ ಮಾಡಬೇಕೆಂದು ಒತ್ತಡ ಜೋರಾಗಿದೆ. ಅಲ್ಲದೆ ಪರೇಶ್ ಮೇಸ್ತಾ ಕೇಸ್ ರೀ ಓಪನ್ ಗೆ ಮಲೆನಾಡು, ಕರಾವಳಿ ಶಾಸಕರು, ಕಾರ್ಯಕರ್ತರಿಂದಲೂ ಒತ್ತಡ ಹೆಚ್ಚಾಗಿದೆ.
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.