ಬೈಂಕಪಾಡಿಯ ಕಂಪೆನಿಗೆ ಕೋಟ್ಯಾಂತರ ರೂ. ವಂಚನೆ- ನಾಲ್ವರ ಸೆರೆ

ಮಂಗಳೂರು ಅ.14: ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಪ್ರೈ.ಲಿ. ಕಂಪೆನಿಗೆ ಗುಜರಾತ್ ನಿಂದ ಬರುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಪ್ಲಾಸ್ಟಿಕ್ ಕಚ್ಛಾ ಸಾಮಗ್ರಿಗಳನ್ನು ಕಳವುಗೈದು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಮಂಗಳೂರು ಸಿಸಿಬಿ ಮತ್ತು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಂದಲೆಯ ಪ್ರಸ್ತುತ ಬಿಜೈ ಕಾಪಿಕಾಡ್‍ನ ಅಪಾರ್ಟ್‍ಮೆಂಟ್ ವೊಂದರಲ್ಲಿ ವಾಸವಾಗಿರುವ ಮಹೇಶ್ ಕುಲಾಲ್  ಯಾನೆ ಮಹೇಶ್ ರಘು ಕುಲಾಲ್ (38), ಶಕ್ತಿನಗರ ಕ್ಯಾಸಲಿನ ಕಾಲನಿ ರಸ್ತೆಯ ಅನಂತ ಸಾಗರ (39), ಕಡಂದಲೆ ಗ್ರಾಮದ ಪಟ್ಲ ಹೌಸ್ ನ ಸಾಯಿ ಪ್ರಸಾದ್ (35),  ತಮಿಳುನಾಡಿನ  ಕಿರಣ್ ಸಮಾನಿ (53) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಇನ್‍ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಪಣಂಬೂರು ಇನ್‍ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ 6 ಮೊಬೈಲ್ ಫೋನ್ ಗಳು, 4 ಲ್ಯಾಪ್ ಟಾಪ್ ಗಳು, 1 ಕಂಪ್ಯೂಟರ್, 3 ಕಾರುಗಳು, 1 ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಕಂಪೆನಿಯಲ್ಲಿ ತಯಾರಿಸಲಾಗುವ ಉತ್ಪನ್ನಗಳಿಗೆ ಬೇಕಾದ ಸರಕುಗಳನ್ನು ಗುಜರಾತ್‍ನಿಂದ ತರಿಸಲಾಗುತ್ತಿದೆ. ಕಂಪನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತನು ಕಂಪೆನಿಗೆ ಲಾರಿಯಲ್ಲಿ ಬರುತ್ತಿದ್ದ ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ವೀಕೃತಿಗೊಂಡಂತೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕಂಪನಿಗೆ ತಿಳಿಯದಂತೆ ಇತರೊಂದಿಗೆ ಸೇರಿಕೊಂಡು 2019 ರ ಡಿಸೆಂಬರ್ ನಿಂದ 2022ರ ಜನವರಿವರೆಗೆ ಕೋಟ್ಯಂತರ ಮೌಲ್ಯದ 36 ಟ್ರಕ್ ಗಳಲ್ಲಿ ಬಂದ 840 ಟನ್ ಕಚ್ಚಾ ಸರಕುಗಳನ್ನು ಕಳವು ಮಾಡಿದ್ದ ಎಂದು ದೂರಲಾಗಿದೆ.

ಕಳವು ಮಾಡಿದ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ ತನ್ನ ಸ್ನೇಹಿತ ಅನಂತ ಸಾಗರ ಎಂಬಾತನಿಗೆ ನೀಡುತ್ತಿದ್ದು, ಆತನು ಈ  ಕಚ್ಚಾ ಸರಕುಗಳನ್ನು ತಾನು ಕೆಲಸ ಮಾಡುತ್ತಿರುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ ನ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಮಾಡಿ ಅದನ್ನು ಬೆಂಗಳೂರಿನ ಹೆಚ್.ಎಸ್ ಪಾಲಿಮಾರ್ ನ ಆರೋಪಿ ಕಿರಣ್ ಸಾಮಾನಿಗೆ ಮಾರಾಟ ಮಾಡುತ್ತಿದ್ದ. ಆರೋಪಿ ಮಹೇಶ್ ಕುಲಾಲ್ ಕಚ್ಚಾ ಸರಕುಗಳನ್ನು ಕಳವು ಮಾಡಿ ಮಾರಾಟ ಮಾಡಿದ ಹಣದಲ್ಲಿ ನಗರದ ವಿವಿಧ ಕಡೆಗಳಲ್ಲಿ ಜಮೀನು ಖರೀದಿಸಿದ್ದಾನೆ. ಅಲ್ಲದೆ ಕಾರುಗಳನ್ನು ಖರೀದಿಸಿ ಐಶಾರಾಮಿ ಜೀವನ ನಡೆಸುತ್ತಿದ್ದನು. ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ ಇನ್ಸೂರೆನ್ಸ್, ಶೇರು ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದಾನೆ. ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ ಗಳನ್ನು ಕೂಡ ಹೊಂದಿದ್ದಾನೆ. ಅನಂತ ಸಾಗರನು ಐಷಾರಾಮಿ ಕಾರು ಖರೀದಿಸಿ, ಮನೆಯನ್ನು ಕಟ್ಟಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!