ಹಿಜಾಬ್ ನಿಷೇಧ ಆದರೆ ದೇಶದ ಮುಸ್ಲಿಂ ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ- ಶೋಭಾ ಕರಂದ್ಲಾಜೆ
ಉಡುಪಿ ಅ.14 (ಉಡುಪಿ ಟೈಮ್ಸ್ ವರದಿ): ನ್ಯಾಯಾಲಯದಲ್ಲಿ ಹಿಜಾಬ್ ನಿಷೇಧ ಆದರೆ ದೇಶದ ಮುಸ್ಲಿಂ ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಬಂದ ಭಿನ್ನ ಅಭಿಪ್ರಾಯದ ತೀರ್ಪಿನ ಬಗ್ಗೆ ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಸಹಜವಾಗಿ ನಾವೆಲ್ಲರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ಆದರೆ ಅದರಲ್ಲಿರುವ ತಪ್ಪುಗಳನ್ನು ಗುರುತಿಸಿ ಅದನ್ನು ಸರಿ ಮಾಡುವ ಕೆಲಸಗಳು ಆಗಬೇಕು. ಇಂದು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವರ ಮನೆಯ ಪುರುಷರು ಹಿಜಾಬ್ ಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಕೋರ್ಟ್ ನಲ್ಲಿ ಹಿಜಾಬ್ ನಿಷೇಧ ಮಾಡಿದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗುತ್ತದೆ ಎಂಬುದನ್ನು ಆ ಮಕ್ಕಳು ಆಲೋಚನೆ ಮಾಡಬೇಕು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗುವುದು, ಉದ್ಯೋಗ ಸಿಗುವುದು ಮುಖ್ಯ, ಅವರು ಸ್ವಾವಲಂಬಿಯಾಗಿ ನಿಲ್ಲುವುದು ಮುಖ್ಯವಾಗಿದೆ. ಅವರು ಪುರುಷರು ಹೇಳಿದ ತಾಳಕ್ಕೆ ಅವರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ತಪ್ಪು. ಅದನ್ನು ಈಗಲಾದರೂ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ವಿಭಿನ್ನ ತೀರ್ಪು ಬಂದಿರುವ ಕಾರಣ ಹಿಜಾಬ್ ವಿಚಾರಣೆ ಸಂವಿಧಾನ ಪೀಠಕ್ಕೆ ಹೋಗಬಹುದು ಎಂಬುದು ನಮ್ಮ ಅಭಿಪ್ರಾಯ. ಸಂವಿಧಾನ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆದರೆ ಈ ದೇಶದಲ್ಲಿ ಹಿಜಾಬ್ ಅಗತ್ಯ ಇದೆಯೋ..? ಇಲ್ಲವೋ..? ಎನ್ನುವ ಬಗ್ಗೆ ಕೋರ್ಟ್ ತೀರ್ಮಾನ ಮಾಡುತ್ತದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಭವಿಷ್ಯದಲ್ಲಿ ಎಲ್ಲಾ ಮಹಿಳೆಯರು ಸ್ವತಂತ್ರವಾಗಿ ಬದುಕಲು ನಮ್ಮ ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.
ಇದೇ ವೇಳೆ ಬೆಳ್ತಂಗಡಿ ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಿಎಫ್‍ಐ ಬ್ಯಾನ್ ಆದ ನಂತರ ಅದರ ಬೆಂಬಲಿಗರು ಆತಂಕಗೊಂಡಿದ್ದಾರೆ. ಆದ್ದರಿಂದ ನಮ್ಮೆಲ್ಲರಿಗೂ ಆತಂಕ ಒಡ್ಡುವ ಕರೆಗಳನ್ನು ಬೇರೆ ಬೇರೆ ದೇಶಗಳಿಂದ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಒಂದು ಭಾಗವಾಗಿ ನಿನ್ನೆ ಬೆಳ್ತಂಗಡಿ ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿದೆ. ಇದನ್ನು ನಾನು ಖಂಡಿಸುತ್ತೇನೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚಿ, ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಈ ಮೊದಲು ಹಿಂದೂ ವಿಚಾರ ಮಾತನಾಡಿದಾಗ ಬೆದರಿಕೆ ಕರೆಗಳು ಬರುತ್ತಿದ್ದವು, ಈಗಲೂ ಬರುತ್ತಿದೆ. ಅದು ಇಂಟರ್ ನೆಟ್ ಕರೆ ಆಗಿರುವುದರಿಂದ ಪೊಲೀಸರಿಗೆ ಪತ್ತೆ ಮಾಡಲು ಆಗುತ್ತಿಲ್ಲ. ಆದರೆ ಇದರ ಬಗ್ಗೆ ಹೆದರುವುದೂ ಇಲ್ಲ. ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಆಗಬೇಕು. ಅಂತಹ ಸಂಘಟನೆಗಳಿಗೆ ಬೆಂಬಲ ನೀಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.