ನಳಿನ್ ಕುಮಾರ್ ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಖುಷಿ ಪಡೆಯುವವರು : ಯು ಟಿ ಖಾದರ್ ಟೀಕೆ
ಮಂಗಳೂರು, ಸೆ.29 : ನಳಿನ್ ಕುಮಾರ್ ಕಟೀಲ್ ರವರು ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಖುಷಿ ತಗೊಳ್ಳುವ ವಿಚಾರದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದಾರೆ ಎಂದು ಶಾಸಕ ಯು ಟಿ ಖಾದರ್ ಟೀಕಿಸಿದ್ದಾರೆ.
ಪಿ.ಎಫ್.ಐ ನಿಷೇಧ ಮಾಡುವಂತೆ ಮಾಜಿ ಸಚಿವ ಯುಟಿ ಖಾದರ್ ನನ್ನ ಬಳಿ ಬಂದು ಕಣ್ಣೀರು ಹಾಕಿದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, “ಸುಳ್ಳು ಹೇಳುವುದು, ಆಮೇಲೆ ಸುಳ್ಳಿನ ಮೇಲೆ ರಾಜಕಾರಣ ಮಾಡುವುದು. ಇದು ವಿಘ್ನ ಸಂತೋಷಿಗಳ ಲಕ್ಷಣ ಆಗಿದೆ. ಸುಳ್ಳು ಹೇಳುವುದರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ನಳಿನ್ ಮುಂದೆ ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ. ಅಂತಹ ಅವಶ್ಯಕತೆ ಇನ್ನು ಮುಂದಿನ ದಿನಗಳಲ್ಲೂ ಕೂಡ ಬರುವುದಿಲ್ಲ. ತಾನು ಮಾಡಿದ ಕೆಲಸವನ್ನು ನಾನೇ ಮಾಡಿದ್ದು ಎಂದು ಹೇಳುವಷ್ಟು ಸಾಮಥ್ರ್ಯ, ಧೈರ್ಯವಿಲ್ಲದವರು ಈ ರೀತಿಯ ಅಪಾದನೆ ಮಾಡುವುದು ಸಹಜ ಎಂದಿದ್ದಾರೆ.
ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಸಂಘಟನೆಗಳ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ, ಸಂಸ್ಥೆಗಳ ಮೇಲೆ ಕ್ರಮ ಆಗಲಿ. ಹಲ್ಲೆ, ಅಶಾಂತಿ, ಕೋಮು ದ್ವೇಷದ ಸಂಘಟನೆ ವಿರುದ್ದ ಕ್ರಮ ಆಗಲಿ. ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ಆಗಲಿ. ತೆಗೆದುಕೊಳ್ಳುವ ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ಸಮಾಜದಲ್ಲಿ ಅಶಾಂತಿ ಕಡಿಮೆ ಆಗಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಕ್ರಮಗಳು ಅಗತ್ಯ ಎಂದರು ಹಾಗೂ ನಿಮಗೆ ನಿಜವಾದ ದೇಶಭಕ್ತಿ ಇದ್ದಲ್ಲಿ, ಧರ್ಮದ ಆಧಾರದಲ್ಲಿ ವಿಷ ಬೀಜ ಬಿತ್ತಿ ಸಮಾಜ ಸ್ವಾಸ್ಥ್ಯ ಕೆಡಿಸುವ, ಭಾರತದ ಶ್ರೇಷ್ಠ ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿ ಎಂದು ಸವಾಲು ಹಾಕಿದ್ದಾರೆ