ಮಂಗಳೂರು : ವಿಮಾನ ನಿಲ್ದಾಣದಲ್ಲಿ ಮಿಕ್ಸರ್ ಗ್ರೈಂಡರ್ ನಲ್ಲಿ ಅಕ್ರಮ ಚಿನ್ನ ಸಾಗಾಟ ವ್ಯಕ್ತಿ ವಶಕ್ಕೆ
ಮಂಗಳೂರು(ಉಡುಪಿ ಟೈಮ್ಸ್ ವರದಿ) ಸೆ.28 : ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಿಕ್ಸರ್ ಗ್ರೈಂಡರ್ ನ ಮೋಟಾರ್ ಒಳಭಾಗದಲ್ಲಿರುವ ಕಾಯಿಲ್ ನೊಳಗೆ ಚಿನ್ನವನ್ನಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಕೇರಳದ ತ್ರಿವೆಂಡ್ರಮ್ ಮೂಲದ ವ್ಯಕ್ತಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವ್ಯಕ್ತಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 24 ಕ್ಯಾರೆಟ್ನ 23,09,610 ರೂ. ಮೌಲ್ಯದ 461 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈತ ದುಬೈಯಿಂದ ಮಂಗಳೂರಿಗೆ ಬಂದಿಳಿದಿದ್ದು, ಕಾಯಿಲ್ ನ ಕೋಟಿಂಗ್ ಅಳಿಸಿದಾಗ ಆಯತಾಕಾರದ ಬಾರ್ ಮಾದರಿಯಲ್ಲಿ ಚಿನ್ನವನ್ನು ಸಾಗಿಸುತ್ತಿರುವುದು ಗೊತ್ತಾಗಿದೆ.