ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ದ : ಯಶಪಾಲ್
ಉಡುಪಿ ಸೆ.28 (ಉಡುಪಿ ಟೈಮ್ಸ್ ವರದಿ) : ಬ್ರಹ್ಮಗಿರಿ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ಹೆಸರು ಇಡಬೇಕೆಂಬ ನಿರ್ಣಯವನ್ನು ವಾಪಸ್ಸು ಪಡೆದು ಅಲ್ಲಿಯೇ ಸಾವರ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಗಿರಿ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ಹೆಸರು ಇಡಬೇಕು ಹಾಗೂ ಪುತ್ಥಳಿ ನಿರ್ಮಿಸಬೇಕೆಂಬ ನಿರ್ಣಯವನ್ನು ಈಗಾಗಲೇ ಮಾಡಲಾಗಿದ್ದು, ಆ ನಿರ್ಣಯವನ್ನು ವಾಪಾಸ್ಸು ಪಡೆದು ಇವತ್ತಲ್ಲ ನಾಳೆ ಉಡುಪಿಯ ಅದೇ ಭಾಗದಲ್ಲಿ ಸಾವರ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಸಿದ್ಧ. ಇದು ಉಡುಪಿಯ ಜನತೆ ದೇಶಭಕ್ತ ಸಾವರ್ಕರ್ ಸಲ್ಲಿಸುವ ನಿಜವಾದ ಗೌರವ ಎಂದಿದ್ದಾರೆ.
ಇದೇ ವೇಳೆ ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡಲು ನಮಗೆ ಹೆಮ್ಮೆಯಾಗುತ್ತದೆ ಎಂದ ಅವರು, ಸರಕಾರ, ನಗರಸಭೆ, ಶಾಸಕರ ಗಮನಕ್ಕೆ ತಂದು ಪುತ್ಥಳಿ ನಿರ್ಮಾಣ ಮಾಡಲಾಗುವುದು. ನಗರಸಭೆ ತೆಗೆದು ಕೊಂಡ ನಿರ್ಣಯವನ್ನು ವಾಪಾಸ್ಸು ಪಡೆಯಲು ಕಷ್ಟವಾಗುತ್ತದೆ. ಆದರೂ ಕಾನೂನು ಬದ್ಧವಾಗಿ ಆ ನಿರ್ಣಯವನ್ನು ವಾಪಾಸ್ಸು ಪಡೆದು, ನಂತರ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಗರಸಭೆಗೆ ಇರುವ ಕಾನೂನು ಚೌಕಟ್ಟಿನಡಿಯಲ್ಲಿ ಪುತ್ಥಳಿ ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.