ಮೈಸೂರು ದಸರಾದ ಕವಿಗೋಷ್ಠಿ ಆಮಂತ್ರಣ ಪತ್ರಿಕೆಯಲ್ಲಿ ಯಡವಟ್ಟು: ಟೀಕೆಗಳ ಸುರಿಮಳೆ
ಮೈಸೂರು ಸೆ.27 : ದೇಶದ ಗಮನ ಸೆಳೆಯುವ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ಉಂಟಾಗಿರುವ ತಪ್ಪುಗಳನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಈ ಆಮಂತ್ರಣ ಪತ್ರಿಕೆಯಲ್ಲಿ ದಿವಂಗತರಾಗಿರುವ ಕವಿಯ ಹೆಸರು ಸೇರ್ಪಡೆಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಮತ್ತೊಬ್ಬ ಕವಿಯ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ. ಇದರ ಜೊತೆಗೆ ಸಂಸದರ ಕ್ಷೇತ್ರವನ್ನೇ ಬದಲಿಸಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನ ಕೆಳಗೆ ‘ಮಾನ್ಯ ಸಂಸದರು ಚಾಮರಾಜನಗರ ಲೋಕಸಭಾ ಕ್ಷೇತ್ರ’ ಎಂದು ಉಲ್ಲೇಖಿಸಲಾಗಿದೆ. ಕನ್ನಡದ ಕವಿ ಜಿ.ಕೆ.ರವೀಂದ್ರ ಕುಮಾರ್ ಮೃತಪಟ್ಟಿದ್ದಾರೆ. ಆದರೆ ಅವರ ಹೆಸರನ್ನು ಕವಿಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ. ಎಚ್.ಎಂ.ನಾಗರಾಜರಾಜ ರಾವ್ ಕಲ್ಕಟ್ಟೆ ಅವರ ಹೆಸರಿನಲ್ಲಿರುವ ಕಲ್ಕಟ್ಟೆಯನ್ನು ತಪ್ಪಾಗಿ ‘ಕಲ್ಕತ್ತೆ’ ಎಂದು ತಪ್ಪಾಗಿ ನಮೂದಿಸಲಾಗಿದೆ.
ಇದೀಗ ಈ ತಪ್ಪುಗಳ ಬಗ್ಗೆ ಹಿರಿಯ ಬರಹಗಾರ ಜೋಗಿ ಅವರು ಬಗ್ಗೆ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ‘ನಾಡಿದ್ದು ದಸರಾ ಕವಿಗೋಷ್ಠಿಯಲ್ಲಿ ಕವಿತೆ ಓದಲಿರುವ ಕವಿಗಳ ಪಟ್ಟಿಯಲ್ಲಿರುವ ಜಿಕೆ ರವೀಂದ್ರ ಕುಮಾರ್ ಯಾರು ಕನ್ನಡದ ಅತ್ಯುತ್ತಮ ಕವಿ ಅವರು. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ ಸರ್ಕಾರ ಮರೆಯುವುದಿಲ್ಲ. ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿಗೋಷ್ಠಿಗೆ ಕರೆಯುತ್ತದೆ. ಅಯ್ಯೋ ಸುನಿಲ್. ಈರೆನ ಗತಿಯೇ!’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ‘ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ’ ಎಂದು ಸಲಹೆ ಮಾಡಿದ್ದರು.
‘ದಸರಾ ಕವಿಗೋಷ್ಠಿಯ ಕವಿಗಳ ಆಯ್ಕೆ ಪ್ರಕ್ರಿಯೆ ಹೇಗೆ..? ಯಾರು ಆಯ್ಕೆ ಮಾಡ್ತಾರೆ ’ ಎಂದು ಕೇಳಿದ್ದಾರೆ. ಹಾಗೂ ‘ದಿವ್ಯ ಬೇಜವಾಬ್ದಾರಿತನಕ್ಕೆ ಇನ್ನೊಂದು ನಿದರ್ಶನ ಇಲ್ಲಿದೆ. ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರನ್ನಾಗಿ ಮಾಡಿದ್ದಾರೆ. ವಿ. ಶ್ರೀನಿವಾಸಪ್ರಸಾದ್ ಅವರು ಏನಾಗಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.