ರಜತ ವರ್ಷದ ಸಂಭ್ರಮ; ಜಿಲ್ಲೆಯ ಅಭಿವೃದ್ಧಿ ಕುರಿತು ಜನಾಭಿಪ್ರಾಯ

ಉಡುಪಿ ಜಿಲ್ಲೆಯಾಗಿ 25 ವರ್ಷ ಸಂದಿದೆ ಈ ಸಮಯದಲ್ಲಿ ಅದ ಅಬಿವೃದ್ದಿಯೆಷ್ಟು ಆಗಬೇಕಾದದ್ದು ಎಷ್ಟು? ಕುರಿತಾಗಿ ಉಡುಪಿ ಟೈಮ್ಸ್ ವೆಬ್ಸೈಟ್ ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿತ್ತು. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಅದರಲ್ಲಿ ಆಯ್ದ ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

25 ವರುಷ ತೀರ ಹರುಷ ತರುವುದೇನು ಅಲ್ಲ: ಶ್ರೀ ರಾಜ್ ಗುಡಿ : ಆಡಳಿತಾತ್ಮಕವಾಗಿ ಜಿಲ್ಲಾ ಸ್ತರದಲ್ಲಿ ಕೆಲ ಹುದ್ದೆಗಳ ನಿರ್ಮಾಣ ಆಗಿದೆ ಮತ್ತು ಆಡಳಿತ ಭವನ ಇತ್ಯಾದಿ ಕಟ್ಟಡಗಳು ತಲೆ ಎತ್ತಿ ನಿಂತಿದೆ. ಆದರೆ ಜಿಲ್ಲಾ ನಿರ್ಮಾಣದ ಮೂಲ ಆಶಯ ವಿಕೇಂದ್ರಿಕರಣ ಮತ್ತು ಸಮಾಜದ ಕೊನೆಯ ವ್ಯಕ್ತಿಯವರೆಗೆ ಸರಕಾರದ ಆಶಯಗಳು ತಲುಪಬೇಕು ಎಂದು ಅದು ಇವತ್ತಿಗೂ ಸಾಧ್ಯ ಆಗಿಲ್ಲ. ಸಣ್ಣ ಉದಾಹರಣೆ ಎಂದರೆ, ಕಾಲು ಸಂಕ ನಿರ್ಮಾಣ ಕುರಿತು ಮಾಧ್ಯಮಗಳು ಸಾಕಷ್ಟು ಬಾರಿ ಗಮನ ಸೆಳೆದಿವೆ, ಆದರೆ ಪ್ರತಿ ಮಳೆಗಾಲದಲ್ಲಿ ಜಿಲ್ಲೆ ಯಲ್ಲಿ ಕನಿಷ್ಟ ಒಂದು ಅವಘಡ ಆಗುತ್ತಾನೆ ಇದೆ. ಈ ಕಾಲು ಶತಮಾನದಲ್ಲಿ ಎಲ್ಲಾ ಕಾಲುಸಂಕಗಳನ್ನು ಪಕ್ಕಾ ಸೇತುವೆಗಳಾಗಿ ನಿರ್ಮಿಸಲು ಸಾಧ್ಯವೇ ಆಗಿಲ್ಲ, ಹಾಗಿದ್ದರೆ ಜಿಲ್ಲಾ ಆಡಳಿತ ಪಕ್ಕದಲ್ಲಿ ಇದ್ದು ಏನು ಪ್ರಯೋಜನ? ಇದೆಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ.

ಸ್ವಚ್ಛ, ಸಮೃದ್ಧ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಅರಳಿ, ನಲಿಯಬೇಕಿದೆ:ಚಂದ್ರಿಕಾ ನಾಗರಾಜ್ ಹಿರಿಯಡ್ಕ
ಉಡುಪಿ ಜಿಲ್ಲೆಯಾಗಿ ರೂಪುಗಳು 25 ವರ್ಷಗಳನ್ನು ಪೂರೈಸಿದೆ. ಇದು ಜಿಲ್ಲೆಯ ಜನತೆ ಸಂಭ್ರಮಿಸುವ ವಿಷಯ. ತನ್ನದೇ ಆದ ಕಲೆ, ಸಂಸ್ಕ್ರತಿಗಳಿಂದ ವೈಭವೋಪೇತವಾಗಿ ತಲೆ ಎತ್ತಿ ನಿಂತಿರುವ ದೇವಾಲಯಗಳ ನಗರಿಗೆ ಭೇಟಿ ಕೊಡುವ ಪ್ರವಾಸಿಗರು ಅನೇಕ. ಆದರೆ, ಪ್ರವಾಸೋದ್ಯಮ ಎಂಬುದು ಕೇವಲ ಕೆಲವೇ ಭಾಗಗಳಿಗೆ ಮೀಸಲಾಗಿ ಉಳಿಯುವುದು ಸಲ್ಲ. ಆ ನಿಟ್ಟಿನಲ್ಲಿ ಉಡುಪಿ ಇನ್ನಷ್ಟು ಬೆಳೆಯಬೇಕಿದೆ. ಕೆಲವೇ ಜಿಲ್ಲೆಯ ಎಲ್ಲಾ ಭಾಗಗಳೂ ಅಭಿವೃದ್ಧಿ ಹೊಂದಿ, ಪ್ರೇಕ್ಷಣೀಯ ಸ್ಥಳಗಳು ಕೈ ಬೀಸಿ ಕರೆವಂತಾಗಬೇಕಿದೆ. ಪ್ರವಾಸೀ ತಾಣಗಳ ಮಾಹಿತಿ, ಸಂಪರ್ಕ ಇತ್ಯಾದಿ ವಿಚಾರಗಳು ಎಲ್ಲರನ್ನು ತಲುಪಬೇಕಿದೆ.

ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೇ ಬೇಕು: ಬಿ ಸೀತಾರಾಮ್ ಭಟ್

ನಿವೃತ್ತ ಹಿರಿಯ ಉಪನ್ಯಾಸಕರು ,ಬೆಲ್ಮನ್

ಅತ್ಯಂತ ಸುಶಿಕ್ಷಿತರ ಜಿಲ್ಲೆ ಎನಿಸಿದ ಉಡುಪಿ ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜು ಅತ್ಯಂತ ಅವಶ್ಯಕ. ಖಾಸಗಿ ವೈದ್ಯಕೀಯ ಕಾಲೇಜುಗಳು ಜಿಲ್ಲೆಯಲ್ಲಿ ಇದ್ದರೂ, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸರಕಾರಿ ವೈದ್ಯಕೀಯ ಕಾಲೇಜು ಸರಕಾರದ ಅಭಯ ಹಸ್ತವಿದ್ದಂತೆ. ಸರಕಾರಕ್ಕೆ ಸಲ್ಲಬೇಕಾದ ಎಲ್ಲ ತೆರಿಗೆಗಳನ್ನು ಯಾವುದೇ ವಂಚನೆ ಇಲ್ಲದೆ ಕಾಲಕಾಲಕ್ಕೆ ಪಾವತಿಸುತ್ತಿರುವ ಉಡುಪಿಯ ಜಿಲ್ಲೆಯ ಜನತೆಗೆ ಇದು ಸರಕಾರ ಕೊಡುವ ಪ್ರೋತ್ಸಾಹ ಎಂದು ಭಾವಿಸಬಹುದು. ವಿದ್ಯಾರ್ಥಿಗಳ ಪೋಷಕರಿಗೂ ಇದರಿಂದ ಅಪಾರ ಮಟ್ಟದ ಸಹಾಯ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಉಡುಪಿ ಜಿಲ್ಲೆಯ ರಜತ ಸಂಭ್ರಮದಲ್ಲಿ ಇದೊಂದು ಸಂಭ್ರಮವು ಸೇರ್ಪಡೆಯಾಗಲಿ ಎಂದು ನಾವು ಹಾರೈಸುತ್ತೇವೆ.

ಉಡುಪಿ ಜಿಲ್ಲೆಯ ಮಾಸ್ಟರ್ ಪ್ಲಾನ್ ತಯಾರಾಗಲಿ : ರಾಘವೇಂದ್ರ ಪ್ರಭು ಕರ್ವಾಲ್

ಉಡುಪಿ ಜಿಲ್ಲೆಯಾಗಿ 25 ವಷ೯ ಆಗುತ್ತಿದೆ. ತುಂಬಾ ಸಂತೋಷದ ವಿಷಯ. ಆದರೆ ಬಹಳಷ್ಟು ಅಭಿವೃದ್ಧಿ ಕಾಯ೯ಗಳು ನಡೆಯಬೇಕಾಗಿದೆ. ಪ್ರವಾಸೋಧ್ಯಮ ಆದ್ಯತೆಯ ಕ್ಷೇತ್ರವಾಗಬೇಕು ನಮ್ಮ ಜಿಲ್ಲೆಯಲ್ಲಿ, ಬಹಳಷ್ಟು ಅಪೂವ೯ವಾದ ಸ್ಥಳಗಳಿವೆ
ಉದಾ : ಸೈಂಟ್ ಮೇರಿಸ್ ದ್ವೀಪ, ಬಾಕೂ೯ರು, ಉಡುಪಿ ಮಣಿಪಾಲ ಸ್ಥಳ, ವಿವಿಧ ರೀತಿಯ ಸಮುದ್ರ ತೀರಗಳು ಆದರೆ ಈ ಸ್ಥಳಗಳು ಅಭಿವೃದ್ಧಿಯಾಗಿ ಹೆಚ್ಚಿನ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು.ಇದರಿಂದ ಉದ್ಯೋಗ ಅವಕಾಶ’, ಮೂಲಭೂತ ಸೌಕಯ೯ ಅಭಿವೃದ್ಧಿಯಾಗಲು ಸಾಧ್ಯ.
ಕೈಗಾರಿಕೆಗಳಿಗೆ ಪ್ರಾಶಸ್ಯ ಸಿಗಲಿ : ನಮ್ಮ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ – ಹೀಗಾಗಿ ಕೈಗಾರಿಕೆಗಳು ಇದ್ದರೆ ಉದ್ಯೋಗ ಅವಕಾಶ, ಮೂಲಭೂತ ಸೌಕಯ೯ ಅಭಿವೃದ್ಧಿಯಾಗಲು ಪೂರಕವಾಗಲು ಸಾಧ್ಯ.
ರಸ್ತೆ ಅಭಿವೃದ್ಧಿ ಆಗಬೇಕಾಗಿದೆ ಜಿಲ್ಲೆಯ ಹೆಚ್ಚಿನ ರಸ್ತೆಗಳು ಹಾಳಾಗಿ ಹೋಗಿದೆ ರಸ್ತೆಯಲ್ಲಿ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ರಸ್ತೆ ಅಭಿವೃದ್ಧಿ ಆಗಬೇಕು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಾಗಲಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾಸ್ಟರ್ ಪ್ಲಾನ್ ತಯಾರು ಮಾಡಿ ಸಕಾ೯ರ ದ ಅನುದಾನದಲ್ಲಿ ಅಥವಾ ಪಿಪಿಪಿ ಮಾಡಲ್ ನಲ್ಲಿ ಅಭಿವೃದ್ಧಿಯಾಗಬೇಕಾಗಿದೆ
ಈ ಬಗ್ಗೆ ರಾಜಕೀಯ ಇಚ್ಚಾ ಶಕ್ತಿ ಮುಖ್ಯವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯು ಅಭಿವೃದ್ಧಿಯಲ್ಲಿ ಒಂದು ಮಾಡಲ್ ಆಗಿ ಮೂಡಿಬರಲಿ ಎಂಬ ಹಾರೈಕೆ.

ಜಿಲ್ಲೆಯ ಅಭಿವೃದ್ಧಿಗೆ ಬದಲಾದ ಇಚ್ಛಾಶಕ್ತಿಯ ನಡೆಗಳು ಬೇಕು: ಜಿ ವಾಸುದೇವ ಭಟ್ ಪೆರಂಪಳ್ಳಿ

ಪ್ರವಾಸೋದ್ಯಮ ವಿಚಾರಕ್ಕೆ  ಸಂಬಂಧಿಸಿ ನಿರೀಕ್ಷಿತ ಪ್ರಗತಿಯಾಗಿಲ್ಲ . ಆದ್ರೆ ಸ್ವಲ್ಪಮಟ್ಟಿನ ಬೆಳವಣಿಗೆಗಳು ನಡೆದಿವೆ ಎನ್ನಲಡ್ಡಿಯಿಲ್ಲ . ಮತ್ತಷ್ಟನ್ನು ಸಾಧಿಸಲು ಕೇವಲ ಹೇಳಿಕೆಯ ರಾಜಕಾರಣ ಸಾಲದು ; ಬದಲಾಗಿ ಬದಲಾದ ಇಚ್ಛಾಶಕ್ತಿಯ ನಡೆಗಳು ಬೇಕು.

ಜಿಲ್ಲೆಯ ಅದ್ಭುತವಾದ ಪ್ರಾಕೃತಿಕ ಸೊಬಗು ಸೊಗಸು ಸೊಗಡುಗಳನ್ನು ಮತ್ತು ಧೀಮಂತವೂ ಶ್ರೀಮಂತವೂ ಆದ ಧಾರ್ಮಿಕ ಸಾಂಸ್ಕೃತಿಕ ವೈಭವಗಳನ್ನು ಜೊತೆಗಿಟ್ಟುಕೊಂಡೇ ಪ್ರವಾಸೋದ್ಯಮ ಅಭಿವೃದ್ಧಿಯ ಚಿಂತನೆ ಮತ್ತು ಕಾರ್ಯಾನುಷ್ಠಾನ ಸಾಧಿಸಲ್ಪಡಬೇಕು . ಮೂಲ ಸೊಬಗನ್ನು ಅಳಿಸಿ ಅವುಗಳ ಅಸ್ತಿತ್ವಕ್ಕೆ ಸಂಚಕಾರ ತಂದು ಸಾಧಿಸಬಹುದಾದ ಪ್ರವಾಸೋದ್ಯಮ ಅತ್ಯಂತ ಅಪಾಯಕಾರಿ . ಇವತ್ತು ಕೊಡಗು ಮತ್ತು ಉತ್ತರಭಾರತದ ಕೆಲವು ಕ್ಷೇತ್ರಗಳಲ್ಲಿನ ಅನಾಹುತಗಳು ಕಣ್ಣ ಮುಂದೆ ರಾಚುತ್ತಿರುವುದು ನಮಗೆ ಪಾಠವಾಗಬೇಕು . ಈ ಹಿಂದೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಇಂಡಿಯಾ ಟುಡೆ ಪತ್ರಿಕೆಯ ಒಂದು ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಕೃತಿ ಮತ್ತು ಸಾಂಸ್ಕೃತಿಕ ಸೊಗಡನ್ನು ಆಧರಿಸಿ ದೇಶದಲ್ಲಿ ಪ್ರದೇಶವಾರು ಔದ್ಯಮಿಕ ಆರೋಗ್ಯ ಶೈಕ್ಷಣಿಕ ಆರ್ಥಿಕ ಪ್ರಗತಿಯನ್ನು ಸಾಧಿಸುವ ಅದ್ಭುತ ಚಿಂತನೆಯನ್ನು ಮಂಡಿಸಿದ್ದರು . ಇದನ್ನು ಮಾನದಂಡವಾಗಿ ಬಳಸಿದಲ್ಲಿ ನಿಸ್ಸಂಶಯವಾಗಿ ಪ್ರಕೃತಿ -ಪ್ರವಾಸೋದ್ಯಮ- ಪ್ರಗತಿ ಗಳನ್ನು ಜೊತೆಯಾಗಿ ಸಾಧಿಸಲು ವಿಪುಲ ಅವಕಾಶಗಳಿವೆ . ಆದರೆ ಈ ಬಗ್ಗೆ ಪ್ರಬಲ ಇಚ್ಛಾಶಕ್ತಿ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಬೇಕು . ಕಲಾಂ ಅವರ ಚಿಂತನೆಯಂತೆ ರಾಜ್ಯದ ಕರಾವಳಿಯನ್ನೊಳಗೊಂಡಂತೆ ದಕ್ಷಿಣದ ಕೇರಳ ತ ನಾಡುಗಳಲ್ಲಿಸ್ಥಳಗಳ ಅನ್ನು ಐಟಿ ಉದ್ಯಮಗಳು( ಸಾಫ್ಟ್ ವೇರ್) ಜವಳಿ ಉದ್ಯಮ ಕೃಷಿಕೈಗಾರಿಕೆಗಳು , ಆಯುರ್ವೇದ ಸಂಬಂಧಿ ಉದ್ಯಮಗಳು ,ಮೀನುಗಾರಿಕೆ ,  ಹೆಚ್ಚು ಅನುಕೂಲಕರ . ಜೊತೆಗೆ ಈ ಪ್ರದೇಶಗಳ ಪ್ರಾಚೀನ ನಗರಗಳು ಮತ್ತು ಸ್ಥಳಗಳನ್ನು ಹೆರಿಟೇಜ್ ಸಿಟಿಗಳಾಗಿ ಉಳಿಸಿಕೊಂಡು ಪ್ರವಾಸಿಗರ ಆತಿಥ್ಯಗಳಿಗೆ ಬೇಕಾದ ಆದ್ಯತೆಗಳನ್ನು ಒದಗಿಸಬೇಕು .‌ಸೊರಕೆಯವರು ನಗರಾಭಿವೃದ್ಧಿ ಮಂತ್ರಿಯಾದ ಹೊತ್ತಲ್ಲಿ ಉಡುಪಿ ನಗರವನ್ನು ಹೆರಿಟೇಜ್ ಸಿಟಿಯಾಗಿ ರೂಪಿಸುವ ಘೋಷಣೆ ಮಾಡಿದ್ರು . ನಂತರ ಅದು ಅವರ ಹಿಂದೆಯೇ ಹೋಯ್ತು ಹೀಗಾದ್ರೆ ಶೂನ್ಯ ಫಲಿತಾಂಶವೇ ನಿರೀಕ್ಷಿಸಬಹುದು .‌ 

Leave a Reply

Your email address will not be published. Required fields are marked *

error: Content is protected !!