ಉಡುಪಿ ಜಿಲ್ಲೆ: ತಾಲೂಕಿನಿಂದ ಜಿಲ್ಲೆಯೆಡೆಗೆ ಸಾಗಿದ ಅಭಿವೃದ್ಧಿಯ ರಜತ ಪಥ

ಉಡುಪಿ ಆ.25 (ಉಡುಪಿ ಟೈಮ್ಸ್ ವಿಶೇಷ ವರದಿ): ಕೆಲವೊಂದು ದಿನಗಳು ನಮಗೆ ತುಂಬಾ ವಿಶೇಷವಾದದ್ದಾಗಿರುತ್ತದೆ. ಅದೇ ರೀತಿ ಆಗಸ್ಟ್ 25 ಎನ್ನುವುದು ಉಡುಪಿ ಜಿಲ್ಲೆ ಹಾಗೂ ಜಿಲ್ಲೆಯ ಜನತೆಯ ಪಾಲಿಗೆ ತುಂಬಾ ವಿಶೇಷವಾದದ್ದು. ಅದರಲ್ಲೂ ಈ ವರ್ಷದ ಆಗಸ್ಟ್ 25 ಮಾತ್ರ ಮತ್ತಷ್ಟು ವಿಶೇಷವಾಗಿ ಉಡುಪಿ ಜಿಲ್ಲೆಯ ಪಾಲಿಗೆ ಮಹತ್ವವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಇಂದು ಕಾರಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಾಗಿದ್ದ ಉಡುಪಿ ಸ್ವತಂತ್ರ ಉಡುಪಿ ಜಿಲ್ಲೆಯಾಗಿ ಘೋಷಣೆಗೊಂಡ ದಿನ.

ಹೌದು… ಇಂದಿಗೆ ಉಡುಪಿ ಜಿಲ್ಲೆಯಾಗಿ ಘೋಷಣೆಗೊಂಡು 25 ವರ್ಷಗಳನ್ನು ಪೂರೈಸಿದೆ. ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೂತನ ಜಿಲ್ಲೆಯಾಗಿ ಹುಟ್ಟಿಕೊಂಡ ಉಡುಪಿ ಜಿಲ್ಲೆ ಇಂದು ದೇಶದ ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲೆ ರಜತಮಹೋತ್ಸವವನ್ನು ಆಚರಿಸುತ್ತಿದೆ. 1997ರ ಆ.25 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ರಾಜ್ಯದ 27 ನೇ ಜಿಲ್ಲೆಯಾಗಿ ನೂತನ ಉಡುಪಿ ಜಿಲ್ಲೆಯನ್ನು ಅಂದಿನ ಮುಖ್ಯಮಂತ್ರಿ ಆಗಿದ್ದಂತಹ ಜೆ ಎಚ್ ಪಾಟೀಲ್ ಅವರು ಘೋಷಣೆ ಮಾಡಿ ಅಧಿಕೃತವಾಗಿ ಉದ್ಘಾಟಿಸಿದರು.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅಂದು ಸಚಿವರಾಗಿದ್ದಂತಹ ಎಂ.ಪಿ. ಪ್ರಕಾಶ್, ಜಯಪ್ರಕಾಶ್ ಹೆಗ್ಡೆ, ಬಚ್ಚೆಗೌಡ, ಅನಂತ್ ಕುಮಾರ್ ಹಾಗೂ ಶಾಸಕರಾಗಿದ್ದ ಯು ಆರ್ ಸಭಾಪತಿ ಅವರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಈ ಹೊಸ ಅಭಿವೃದ್ಧಿಯ ಮೊದಲ ಹೆಜ್ಜೆಗೆ ಸಾಕ್ಷಿಯಾಗಿದ್ದರು. ಉಡುಪಿ, ಕುಂದಾಪುರ, ಕಾರ್ಕಳ ಮೂರು ತಾಲೂಕುಗಳೊಂದಿಗೆ ಆರಂಭವಾದ ಉಡುಪಿ ಜಿಲ್ಲೆ ಇಂದು ಕಾಪು , ಹೆಬ್ರಿ, ಬೈಂದೂರು, ಬ್ರಹ್ಮಾವರ ತಾಲೂಕು ರಚನೆ ಮೂಲಕ ಗ್ರಾಮೀಣ ಭಾಗಗಳಲ್ಲಿಯೂ ಆಡಳಿತಾತ್ಮಕ ಸೇವೆಗಳನ್ನು ಸುಲಭ ರೀತಿಯಲ್ಲಿ ಜನರಿಗೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಂದು ಜಿಲ್ಲೆಯ ಜನೆತೆಗೆ ಸುಲಭವಾಗಿ ಹಾಗೂ ತ್ವರಿತವಾಗಿ ಆಡಳಿತ ನೀಡುವ ಉದ್ದೇಶದಿಂದ ಸ್ಥಾಪನೆಯಾದ ಉಡುಪಿ ಜಿಲ್ಲೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

25 ವರ್ಷಗಳ ಹಿಂದೆ ಉಡುಪಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಸಮಯದಲ್ಲಿ ಬೈಂದೂರಿನಿಂದ ಹಿಡಿದು ಕುಂದಾಪುರ, ಕಾರ್ಕಳ, ಹೆಬ್ರಿ, ಉಡುಪಿ , ಕಾಪುವಿನ ಜನರು ಯಾವುದೇ ಆಡಳಿತಾತ್ಮಕ ಸೇವೆಗಳನ್ನು ಪಡೆಯಲು ದೂರದ ಮಂಗಳೂರಿಗೆ ತೆರಳಬೇಕಿತ್ತು. ಉಡುಪಿ ನಗರದ ಜನರಿಗೆ ಇದು ಅಷ್ಟು ದೂರ ಎನಿಸದಿದ್ದರೂ ಬೈಂದೂರು, ಕುಂದಾಪುರದವರಿಗೆ 100-150 ಕಿ.ಮಿ ಪ್ರಯಾಣಿಸಬೇಕಾಗಿ ಬರುತ್ತಿತ್ತು. ಇದರಿಂದ ಜಿಲ್ಲಾಧಿಕಾರಿ ಕಚೇರಿ, ಆರ್ ಟಿ ಓ , ಜಿಲ್ಲಾ ನ್ಯಾಯಾಲಯ, ಜಿಲ್ಲಾ ಆಸ್ಪತ್ರೆ, ಶಿಕ್ಷಣ, ಪೊಲೀಸ್ ಇಲಾಖೆ ಮುಂತಾದ ಇಲಾಖೆಗಳ ಸೇವೆಗಳಿಗೆ ಮಂಗಳೂರಿಗೆ ಹೋಗಬೇಕಾಗುತ್ತಿತ್ತು. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಉಡುಪಿ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಡಾ.ವಿಎಸ್ ಆಚಾರ್ಯ, ಶಾಸಕರಾಗಿದ್ದ ಯು.ಆರ್.ಸಭಾಪತಿ ಅವರ ಹಲವು ಪ್ರಯತ್ನದ ಬಳಿಕ 1997ರಲ್ಲಿ ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿತು. ಇದೀಗ ಇಂದು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಎಸ್.ಪಿ ಕಚೇರಿ, ಜಿಲ್ಲಾ ನ್ಯಾಯಾಲಯ, ಆರ್‍ಟಿಒ, ಡಿಡಿಪಿಒ ಸೇರಿದಂತೆ ಅನೇಕ ಸೇವೆಗಳು ಲಭ್ಯವಿದೆ. ಈ ಮೂಲಕ ಜಿಲ್ಲೆಯ ಜನತೆಗೆ ಅಗತ್ಯ ಸೇವೆಗಳು ಬಹಳ ಹತ್ತಿರವಾಯಿತು.

ಉಡುಪಿ ಆರಂಭದಿಂದಲೂ ಶೈಕ್ಷಣಿಕವಾಗಿ ಮುಂದುವರೆದಿತ್ತು ಮಣಿಪಾಲದಲ್ಲಿ ಅದಾಗಲೇ ಶೈಕ್ಷಣಿಕ ಸಂಸ್ಥೆಗಳು ತೆರೆದುಕೊಂಡಿದ್ದವು. ನಂತರದ ದಿನಗಳಲ್ಲಿ ಒಂದೊಂದೇ ಶಿಕ್ಷಣ ಸಂಸ್ಥೆಗಳು ತೆರೆದುಕೊಂಡು ಇಂದು ಉಡುಪಿ ಜಿಲ್ಲೆ ಶೈಕ್ಷಣಿಕ ಹಬ್ ಆಗಿ ಮಾರ್ಪಟ್ಟಿದೆ. ಇಲ್ಲಿ ದೇಶ ವಿದೇಶಗಳ ಜನರು ಜ್ಞಾನಾರ್ಜನೆಗಾಗಿ ಬರುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪ್ರತೀ ವರ್ಷ ಎಸ್‍ಎಸ್‍ಎಲ್‍ಸಿ,ಪಿಯುಸಿ ಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಕ್ರೀಡೆಯಲ್ಲಿಯೂ ಇಂದು ಉಡುಪಿ ಜಿಲ್ಲೆಯ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಾದ ಬಳಿಕ ಉಡುಪಿಯ ಪ್ರತಿಭೆಗಳ ಸಾಧನೆಗೆ ಉಡುಪಿ ಜಿಲ್ಲೆ ಪ್ರತ್ಯೇಕವಾಗಿ ಗುರುತಿಸಿ ಕೊಳ್ಳುವಂತಾಗಿದೆ. ಹಾಗೂ ಅನಿವಾರ್ಯ ಸಂದರ್ಬಗಳಲ್ಲಿ ಜಿಲ್ಲೆಯ ಜನರು ತುರ್ತು ಹಾಗೂ ಅಗತ್ಯ ವೈದ್ಯಕೀಯ ಸೇವೆಗಳಿಗೆ ಹೊರ ಜಿಲ್ಲೆಗಳನ್ನು ಅವಲಂಬಿಸಿವೆ ಆದರೂ ಉಡುಪಿ ಜಿಲ್ಲೆಯು ವೈದ್ಯಕೀಯ ಸೇವೆಯಲ್ಲಿ ಹೆಸರುವಾಸಿಯಾಗಿದೆ.

ಅಂದು 1997 ರಲ್ಲಿ ಆಡಳಿತದಲ್ಲಿ ಇದ್ದಂತಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುವಂತೆ ಇಂದು ಉಡುಪಿ ಜಿಲ್ಲೆಯು ನಿರೀಕ್ಷೆಗೂ ಮೀರಿ ಅಭಿವೃದ್ಧಿಯನ್ನ ಕಂಡಿದೆ. ಪ್ರವಾಸೋದ್ಯಮ, ಶೈಕ್ಷಣಿಕ, ಸಾಂಸ್ಕøತಿಕ,ಕ್ರೀಡೆ ಹಾಗೂ ವೈದ್ಯಕೀಯ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡಿದೆ. ಇಂದು ಉಡುಪಿ ಜಿಲ್ಲೆ ಶೈಕ್ಷಣಿಕ ಹಬ್ ಆಗಿ ಬೆಳವಣಿಗೆಯನ್ನು ಕಂಡಿದೆ. ಪ್ರವಾಸೋದ್ಯಮದಲ್ಲಿ ಕೂಡ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. 25 ವರ್ಷಗಳ ಹಿಂದೆ ಕೇವಲ ಒಂದು ಜಿಲ್ಲೆಯ ತಾಲೂಕಾಗಿದ್ದ ಉಡುಪಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದು ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಬಹುಷಃ ಒಂದು ವೇಳೆ ಉಡುಪಿ ಜಿಲ್ಲೆಯಾಗದೇ ಇದ್ದಿದ್ದರೆ ಇಂದು ಈ ಮಟ್ಟಿಗೆ ಅಭಿವೃದ್ಧಿಯಾಗುತ್ತಿರಲಿಲ್ಲವೇನೋ ಎಂದು ಅಂದು ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಉಡುಪಿ ಜಿಲ್ಲೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡಿದ್ದರೂ ಕೂಡ ಸಂಪೂರ್ಣವಾಗಿ ಅಭಿವೃದ್ಧಿ ಆಗಿದೆ ಎನ್ನುವುದು ಅಸಾಧ್ಯ. ಯಾಕೆಂದರೆ ಜಿಲ್ಲೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಇನ್ನೂ ಕೂಡ ಪ್ರಗತಿ ಅಗತ್ಯವಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಟೆಂಪಲ್ ಟೂರಿಸಂ ಅಭಿವೃದ್ಧಿಯನ್ನು ಕಂಡಿದೆ ಆದರೆ ಕರಾವಳಿ ಟೂರಿಸಂ ಇನ್ನೂ ಅಭಿವೃದ್ಧಿ ಆಗಬೇಕಿದೆ. ಜಿಲ್ಲೆಯ ಪ್ರಕೃತಿ ಸಂಪನ್ಮೂಲಗಳಿಗೆ ಅನುಗುಣವಾಗಿ ಇನ್ನೂ ಕೂಡ ಪ್ರವಾಸೋದ್ಯಮ ಅಭಿವೃದ್ಧಿ ಕಂಡಿಲ್ಲ. ಇದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನ ಕಾಣುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಬಹುದಾದ ಅನೇಕ ಸ್ಥಳಗಲೂ ಈಗಲೂ ಎಲೆಮರೆಕಾಯಿಯಂತಿದೆ. ಅವುಗಳ ಅಭಿವೃದ್ಧಿ ಇನ್ನು ಕೂಡ ಆಗಬೇಕಾಗಿದೆ. ಇಲ್ಲಿ ಹಲವಾರು ವರ್ಷಗಳಿಂದ ಸರಕಾರಿ ವೈದ್ಯಕೀಯ ಕಾಲೇಜುಗಳ ಅಗತ್ಯತೆಯ ಕೂಗುಗಳು ಕೇಳಿ ಬರುತ್ತಲೇ ಇದೆ ಆದರೂ ಜಿಲ್ಲೆಯ ಜನತೆಯ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆಯನ್ನು ಈಡೇರಿಸುವಲ್ಲಿ ಹಿನ್ನಡೆಯನ್ನು ಸಾಧಿಸಿದೆ.
ಇದಕ್ಕೆ ರಾಜಕೀಯ ಪ್ರತಿನಿಧಿಗಳ ಅಸಡ್ಡೆಯೋ ಅಥವಾ ಖಾಸಗಿ ಇಲಾಖೆಗೆ ಮನೆ ಹಿಡಿದುದರ ಪರಿಣಾಮವು ತಿಳಿದಿಲ್ಲ ಆದರೆ ಇನ್ನೂ ಕೂಡ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಮಾತ್ರ ಆಗಿಲ್ಲ.

ಇನ್ನು ಯಾವುದೇ ಒಂದು ಜಿಲ್ಲೆ ಅಥವಾ ಯಾವುದೇ ಒಂದು ಪ್ರದೇಶ ಅಭಿವೃದ್ಧಿ ಕಾಣುವಲ್ಲಿ ಸಾರಿಗೆ ಸಂಪರ್ಕ ಹಾಗೂ ಸಮರ್ಪಕವಾದ ರಸ್ತೆ ನಿರ್ಮಾಣ ತುಂಬಾನೇ ಅಗತ್ಯವಾದದ್ದು ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಹೆದ್ದಾರಿ ನಿರ್ಮಾಣ ರಸ್ತೆಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇದೆ. ಆದರೂ ಈಗಲೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಮಾದರಿಯ ಕಾಲು ಸಂಕಗಳನ್ನೇ ಬಳಸುತ್ತಿರುವುದು ಕಂಡುಬರುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ 3-4 ತಿಂಗಳು ಮಳೆಯಾಗತ್ತದೆ. ಇದರಿಂದಾಗಿ ತಾತ್ಕಾಲಿಕ ಪರಿಹಾರಕ್ಕಾಗಿ ನಿರ್ಮಿಸಲಾಗುವ ರಸ್ತೆಗಳು ಹಲವೆಡೆ ಮಳೆಗಾಲದ ಸಂದರ್ಭದಲ್ಲಿ ಹೊಂಡಗುಂಡಿಗಳಿಂದ ತುಂಬಿಕೊಳ್ಳುವಂತಾಗಿದೆ. ಆದ್ದರಿಂದ ಉಡುಪಿ ಜಿಲ್ಲೆಯ ವಾತಾವರಣವನ್ನು ಅಧ್ಯಾಯನ ಮಾಡಿ ಇಲ್ಲಿನ ಮಣ್ಣಿನ ಗುಣಕ್ಕೆ ಅನುಗುಣವಾಗುವಂತೆ ವೈಜ್ಞಾನಿಕ ವಿಧಾನವನ್ನು ಅನುಸರಿಸಿ ರಸ್ತೆಗಳನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ.

ಉಡುಪಿ ಕರಾವಳಿ ಜಿಲ್ಲೆಯಾಗಿರುವುದರಿಂದ ಇಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ ಆದ್ದರಿಂದ ರಸ್ತೆಗಳ ನಿರ್ಮಾಣದ ಜೊತೆಗೆ ಮಳೆ ನೀರು ಹರಿವಿಗೆ ಚರಂಡಿ ವ್ಯವಸ್ಥೆ ಮಾಡುವುದರಿಂದ ರಸ್ತೆಗಳ ಗುಣಮಟ್ಟತೆ ಹೆಚ್ಚಿಸಬಹುದಾಗಿದೆ. ಇದರೊಂದಿಗೆ ರಸ್ತೆಗಳನ್ನು ತಾತ್ಕಾಲಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನೆಲೆಯಲ್ಲಿ ನಿರ್ಮಾಣ ಮಾಡದೆ ಮುಂದಿನ 40-50 ವರ್ಷಗಳ ದೂರದೃಷ್ಟಿಯಿಂದ ನಿರ್ಮಾಣ ಮಾಡುವುದರಿಂದ ರಸ್ತೆ ನಿರ್ಮಾಣ ಯಶಸ್ವಿಯಾಗುತ್ತದೆ ಹಾಗೂ ಒಂದೇ ರಸ್ತೆ ಕಾಮಗಾರಿಗೆ ಅನುದಾನ ವ್ಯರ್ಥ ಮಾಡುವುದು ತಪ್ಪಿಸಬಹುದಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಇನ್ನು ಉಡುಪಿ ಜಿಲ್ಲೆಯ ಸಾಂಸ್ಕøತಿಕವಾಗಿಯೂ ಬಹಳಷ್ಟು ಪ್ರಸಿದ್ದಿ ಹೊಂದಿದೆ. ಅತೀ ಹೆಚ್ಚು ಯಕ್ಷಗಾನ ವೃತ್ತಿ ಮೇಳಗಳು ಇರುವುದು ಉಡುಪಿ ಜಿಲ್ಲೆಯಲ್ಲಿ. ಯಕ್ಷಗಾಯದ ಬಡಗುತ್ತಿಟ್ಟು ಉಡುಪಿಯಲ್ಲಿ ಪ್ರಧಾನವಾಗಿದ್ದು ಅದು ಉಡುಪಿಯ ಸಾಂಸ್ಕೃತಿಕ ವೈಭವವನ್ನು ಸಾರುತ್ತದೆ. ಇದರೊಂದಿಗೆ ಉಡುಪಿಯಲ್ಲಿರುವ ಪುರಾತನ ದೇವಾಲಯಗಳು, ಮಲ್ಪೆ, ಮರವಂತೆ, ಕಾಪು, ಮಟ್ಟು ಕಡಲ ತೀರಗಳು ಜನಾಕರ್ಷನೀಯವಾಗಿದೆ ಇವುಗಳು ಮಾತ್ರಲ್ಲದೆ. ಅನೇಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ಪ್ರೇಕ್ಷಣೀಯ ಸ್ಥಳಗಳು ನಮ್ಮ ಜಿಲ್ಲೆಯಲ್ಲಿದೆ ಅವುಗಳನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ಉಡುಪಿ ಪ್ರವಾಸಿತಾಣಗಳ ಜಿಲ್ಲೆ ಎಂದು ಹೆಸರು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಜಿಲ್ಲೆ ಪ್ರವಾಸೋದ್ಯಮದ ಜೊತೆಗೆ ಮತ್ಸೋದ್ಯಮಕ್ಕೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಮತ್ಸೋದ್ಯಮಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಇದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೊಡುಗೆಗಳು ಅಗತ್ಯವಾಗಿದೆ. ದೇಶದಾದ್ಯಂತ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಹೊಂದಿದೆ ಆದರೆ ಇದು ಪರಿಪೂರ್ಣವಾಗಿಲ್ಲ ಎಂಬುದಕ್ಕೆ ಈಗಲೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ನೆಟ್ವರ್ಕ್ ಸಮಸ್ಯೆಯನ್ನ ಅನುಭವಿಸುತ್ತಿರುವುದು ಉದಾಹರಣೆಯಾಗಿದೆ. ಹಾಗಾಗಿ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸೌಲಭ್ಯವನ್ನು ತಲುಪಿಸುವಲ್ಲಿ ಜಿಲ್ಲೆ ವಿಫಲವಾಗಿದೆ. ಇನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿಯಲ್ಲಿ ಪ್ರತಿ ವರ್ಷ ಬಹಳಷ್ಟು ಐ ಟಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಉದ್ಯೋಗಕ್ಕಾಗಿ ಮಹಾನಗರಗಳನ್ನು ಅವಲಂಬಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬೆಳವಣಿಗೆ ಜಿಲ್ಲೆಗೆ ಹೆಮ್ಮಪಡುವಂತಹದ್ದಾಗಿದ್ದರೂ ಈ ಮಾನವ ಸಂಪನ್ಮೂಲಗಳು ಜಿಲ್ಲೆಯಲ್ಲಿ ಬಳಕೆಯಾಗುತ್ತಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಜಿಲ್ಲೆಯ ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶ ನೀಡುವ ಐಟಿ ಕಂಪೆನಿಗಳ ಅಗತ್ಯತೆ ಬಗ್ಗೆಯೂ ಆಲೋಚನೆ ಮಾಡಬೇಕಾಗಿದೆ. ಇದರ ಜೊತೆಗೆ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿರುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಜಿಲ್ಲೆಯಲ್ಲಿ ಕಾರ್ಯಗಳು ಆಗಬೇಕಿದೆ.

ಏನೇ ಇದ್ದರೂ ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣ ಅಭಿವೃದ್ಧಿ ಸಾಧಿಸುವುದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಉಡುಪಿ ಜಿಲ್ಲೆ ಇನ್ನೂ ಬಹಳಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಆದರೂ ಉಡುಪಿ ಜಿಲ್ಲೆಯ 25 ವರ್ಷಗಳ ಅಭಿವೃದ್ಧಿಯ ಸಾಧನೆ ಕಡಿಮೆ ಏನಲ್ಲ. ಶಿಕ್ಷಣ, ಶಾಂತಿ, ಸೌಹಾರ್ಧತೆಗೆ ಸಾಕ್ಷಿಯಾಗಿರುವ ಉಡುಪಿ ಜಿಲ್ಲೆ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ, ತಾಂತ್ರಿಕ ಕ್ಷೇತ್ರ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಇತರ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಸರುಗಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಮಾಸ್ಟರ್ ಪ್ಲಾನ್ (ದೂರದೃಷ್ಟಿಯ ವ್ಯವಸ್ಥಿತ ಯೋಜನೆ) ಅಗತ್ಯವಿದೆ. ಜಿಲ್ಲೆಯ ಅಭಿವೃದ್ಧಿಗೆ ಕೇವಲ ಆಡಳಿತ ನಡೆಸುವವರು ಮಾತ್ರವಲ್ಲ ಜಿಲ್ಲೆಯ ಜನತೆಯ ಸಹಕಾರವೂ ಅಗತ್ಯವಿದೆ. ಈ ದಿಶೆಯಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!