ಮಳೆಗಾಲ ಮುಗಿದ ನಂತರ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ ಪೂರ್ಣ: ಎನ್.ಎಚ್.ಎ.ಐ
ಮಂಗಳೂರು, ಆ.23 : ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಲು ವಿಳಂಬವಾಗಿದ್ದು, ಮಳೆಗಾಲ ಮುಗಿದ ನಂತರ ರಾಷ್ಟ್ರೀಯ ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಎನ್.ಎಚ್.ಎ.ಐ ಅಧಿಕಾರಿ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸುರತ್ಕಲ್ ಟೋಲ್ ಗೇಟ್ ವಿಲೀನಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗೆ ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಧಿಕಾರಿಗಳು ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಲು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಹಾಗೂ ಇದೇ ವೇಳೆ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಒಂದು ತಿಂಗಳೊಳಗೆ ಸುರತ್ಕಲ್ ಟೋಲ್ ಗೇಟ್ ವಿಲೀನಗೊಳಿಸಲಾಗುವುದು. ವಿಲೀನಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಅದಕ್ಕೆ ಅವರು ಅನುಮತಿ ನೀಡಿದ್ದಾರೆ ಎಂದು ಎನ್.ಎಚ್.ಎ.ಐ ಅಧಿಕಾರಿ ಲಿಂಗೇಗೌಡ ಅವರು ತಿಳಿಸಿದರು.