ಕೃಷ್ಣ ಮಠಕ್ಕೆ ಕನ್ನಡ ನಾಮಫಲಕ ಅಳವಡಿಕೆ
ಉಡುಪಿ (ಉಡುಪಿ ಟೈಮ್ಸ್ ವರದಿ) : ಉಡುಪಿಯ ಶ್ರೀ ಕೃಷ್ಣ ಮಠದ ಮುಖದ್ವಾರದ ಕನ್ನಡ ನಾಮಫಲಕನ್ನು ತೆಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಠದ ಮೂಲಗಳು ಸ್ಪಷ್ಟೀಕರಣ ನೀಡಿದಂತೆ ಇಂದು(ಡಿ.3) ಮಠದ ಮುಖ ದ್ವಾರದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಯಿತು.
ದೇವಸ್ಥಾನದ ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಈ ಹಿಂದೆ ಇದ್ದಂತಹ ಕನ್ನಡ ನಾಮ ಫಲಕವನ್ನು ತೆಗೆದು ಹಾಕಲಾಗಿತ್ತು. ಬಳಿಕ ಸಂಸ್ಕೃತ ಮತ್ತು ತುಳುಲಿಪಿಯ ನಾಮ ಫಲಕವನ್ನು ಅಳವಡಿಸಲಾಗಿತ್ತು ಮಠದ ಈ ನಡೆಯ ಕುರಿತು ಕನ್ನಡ ಸಾಹಿತ್ಯ ಪರಿಷತ್ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಈ ಕ್ರಮವನ್ನು ಖಂಡಿಸುವುದಾಗಿಯೂ ಹೇಳಿತ್ತು.
ಈ ನಡುವೆ ಈ ಕುರಿತಂತೆ ಸ್ಪಷ್ಟಣೆ ನೀಡಿದ ಮಠದ ಮೂಲಗಳು, ಕನ್ನಡವನ್ನು ನಾವು ಕಡೆಗಣಿಸಿಲ್ಲ, ಮಠವನ್ನು ಪುನಶ್ಚೇತನ ಗೊಳಿಸುವ ಸಂದರ್ಭದಲ್ಲಿ ಶ್ರೀಗಳ ಅಭಿಮತದಂತೆ ಮುಖದ್ವಾರದಲ್ಲಿದ್ದ ಪ್ಲಾಸ್ಟಿಕ್ ಫಲಕದ ಬದಲು ಮರದ ಫಲಕವನ್ನು ಹಾಕುವ ಯೋಜನೆ ಹಾಕಿಕೊಳ್ಳಲಾಗಿತ್ತು, ಅದರಂತೆ ಮಠದ ಮುಖದ್ವಾರದಲ್ಲಿ ಮೊದಲು ಕನ್ನಡ ಮತ್ತು ನಂತರ ಸಂಸ್ಕೃತ ಹಾಗೂ ತುಳು ಲಿಪಿಯ ಫಲಕ ಹಾಕುವ ಯೋಜನೆ ಶ್ರೀಗಳದ್ದಾಗಿತ್ತು. ಆದರೆ, ನಾಮ ಫಲಕವನ್ನು ತಯಾರು ಮಾಡುವ ವೇಳೆ ಲಕ್ಷದೀಪ ಬಂದ ಕಾರಣ ಫಲಕ ತಯಾರಿಕಾ ಪ್ರಕ್ರಿಯೆ ನಿಧಾನವಾತ್ತು.
ಮೊದಲು ತಯಾರಾದ ಸಂಸ್ಕೃತ ಮತ್ತು ತುಳು ಲಿಪಿಯ ಫಲಕವನ್ನು ಮೊದಲು ಹಾಕಲಾಗಿದೆ. ಅಲ್ಲದೆ ಮಠದಲ್ಲಿರುವ ಗ್ರಂಥಿ ಲಿಪಿ ತುಳು ಭಾಷೆಯಲ್ಲಿ ಇರುವ ಕಾರಣ ತುಳುವಿಗೂ ಮಾನ್ಯತೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ಫಲಕವನ್ನು ಅಳವಡಿಸಲಾಗಿದೆ. ಸದ್ಯ ಕನ್ನಡ ಲಿಪಿಯ ನಾಮಫಲಕ ತಯಾರಿಕಾ ಪ್ರಕ್ರಿಯೆ ನಡೆಯುತ್ತಿದ್ದು ಅದು ಪೂರ್ಣವಾಗುತ್ತಿದ್ದಂತೆ ಮಠದ ಮುಖದ್ವಾರದ ಪ್ರಾರಂಭದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಗುತ್ತದೆ ಎಂದು ಸ್ಪಷ್ಟೀಕರಣ ನೀಡಿತ್ತು. ಅದರಂತೆ ಇಂದು (ಡಿ.3) ಮಠದ ಮುಖದ್ವಾರದಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಲಾಗಿದೆ.