ಕೊರೋನಾ ನಿಯಂತ್ರಣ ಪರಿಗಣಿಸಿ ಶಾಲೆ ಆರಂಭದ ಬಗ್ಗೆ ನಿರ್ಧಾರ: ಬೊಮ್ಮಾಯಿ
ಉಡುಪಿ(ಉಡುಪಿ ಟೈಮ್ಸ್ ವರದಿ):ರಾಜ್ಯದಲ್ಲಿ ಕೊರೋನಾ ಪ್ರಭಾವ ಯಾವ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ ಎಂಬುದರ ಮೇಲೆ ಶಾಲೆಗಳು ತೆರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು (ಡಿ.3) ಉಡುಪಿಗೆ ಭೇಟಿ ನೀಡಿದ ವೇಳೆ ಈ ಕುರಿತಾಗಿ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ಕುರಿತಂತೆ, ಶಿಕ್ಷಣ ಸಚಿವರು ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಸರಕಾರಿ ಅಧಿಕಾರಿಗಳ ಜೊತೆಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವಾರು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯ ಸರಕಾರದ ಸಚಿವ ಸಂಪುಟ ರಚನೆ ಸಂಬಂಧ ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ರಚನೆ ವಿಚಾರದಲ್ಲಿ ಯಾವುದೇ ತಿಕ್ಕಾಟ, ಗೊಂದಲಗಳು ಇಲ್ಲ. ಮುಖ್ಯ ಮಂತ್ರಿಗಳು ಹೈ ಕಮಾಂಡ್ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿ ಈ ಕುರಿತಂತೆ ಚರ್ಚೆ ನಡೆಸಿ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಮಿ ಅವರು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿಗಳು ಯಾರನ್ನು ಭೇಟಿಯಾಗಬೇಕು ಅವರನ್ನು ಭೇಟಿ ಆಗುತ್ತಾರೆ ಅದು ಅವರ ವಿಚಾರ ಅದನ್ನು ನಾವು ಚರ್ಚೆ ನಡೆಸುವುದು ಸರಿಯಲ್ಲ ಎಂದರು.
ಇನ್ನು ಲವ್ ಜಿಹಾದ್ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಲವ್ ಜಿಹಾದ್ ಸಂಬಂದಿಸಿದ ಕಾನೂನು ತರುವ ಬಗ್ಗೆ ಯಾವುದೇ ಗೊಂದಲ ಇಲ್ಲ, ಮಧ್ಯ ಪ್ರದೇಶ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಈ ಕುರಿತು ಚಿಂತನೆ ಮಾಡಿದ್ದು, ನಮ್ಮ ರಾಜ್ಯದಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂಬ ಚಿಂಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದರು ಅಭಿಮತ ವ್ಯಕ್ತಪಡಿಸಿದರು.
ಇನ್ನು ಹೊಸ ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಲವೆಡೆ ನೈಟ್ ಕರ್ಫ್ಯೂ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಕುರಿತು ಯಾವುದೇ ಚಿಂತನೆ ಇಲ್ಲ ಆದರೆ, ಹೊಸ ವರುಷದ ಸಂಭ್ರಮದ ವೇಳೆ ಹೆಚ್ಚು ಜನ ಸಂದಣಿ ಸೇರದಂತೆ ಎಚ್ಚರ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಅಥವಾ ನಾಳೆ ಸರಕಾರ ಪ್ರಕಟಣೆ ಹೊರಡಿಸಲಿದೆ ಎಂದರು.
ಇದೇ ವೇಳೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ ಕೋಲಾರ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತಣಿಕೆ ನಡೆಸುತ್ತಿದ್ದಾರೆ ಎಂದ ಅವರು, ಬೆಂಗಳೂರು ಗಲಬೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಬಿಬಿಎಂಪಿ ಮಾಜಿ ಸದಸ್ಯ ಝಹೀರ್‌ನನ್ನು ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಇನ್ನು ಡಿಸೆಂಬರ್ 5 ಕರೆ ನೀಡಿರುವ ಬಂದ್ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಸುಪ್ರೀಂ ಕೋರ್ಟ್ ಬಂದ್ ಮಾಡಬಾರದು ಎಂದು ಈಗಾಗಲೇ ಹೇಳಿದೆ, ಇದರ ಹೊರತಾಗಿಯೂ ಬಂದ್ ಮಾಡಿದರೆ ಅದು ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಮುಖ್ಯ ಮಂತ್ರಿಗಳು ಬಂದ್ ಮಾಡದಂತೆ ಕೇಳಿಕೊಂಡಿದ್ದಾರೆ. ಆದರೂ ಮುಂಜಾಗ್ರತೆಯಾಗಿ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.