ಕರಾವಳಿಯಲ್ಲಿ ಅಯ್ಯಪ್ಪ ಭಕ್ತರಿಂದ ಭವನಂ ಸನ್ನಿಧಾನಂ ಅಭಿಯಾನ
ಉಡುಪಿ: ಶಬರಿಮಲೆ ಪ್ರವೇಶ ಮುನ್ನ ಎರಡೆರಡು ಬಾರಿ ಕೋವಿಡ್ ಟೆಸ್ಟ್ ನಿಯಮ ರೂಪಿಸಿರುವ ಕೇರಳ ಸರ್ಕಾರದ ವಿರುದ್ಧ ಕರಾವಳಿಯಲ್ಲಿ ಭವನಂ ಸನ್ನಿಧಾನಂ ಎಂಬ ಅಭಿಯಾನ ಆರಂಭವಾಗಿದೆ. ಕೇರಳ ಸರಕಾರದ ವಿರುದ್ಧ ಉಡುಪಿಯ ಅಯ್ಯಪ್ಪ ಭಕ್ತರು ಆಕ್ರೋಶಗೊಂಡಿದ್ದು, ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪನ ಆರಾಧನೆ ಮಾಡಲು ಭಕ್ತರು ನಿರ್ಧರಿಸಿದ್ದಾರೆ.
ವಿಶ್ವಾದ್ಯಂತ ವ್ಯಾಪಿಸಿರುವ ಕರೋನಾ ಮಹಾಮಾರಿ ಅಯ್ಯಪ್ಪ ಭಕ್ತರಿಗೆ ಈ ಬಾರಿಯ ಶಬರಿಮಲೆಯ ಮುಕ್ತ ಪ್ರವೇಶಕ್ಕೆ ಅಡ್ಡಿಯಾಗಿದೆ. ಆದರೆ ಈ ವಿಚಾರವಾಗಿ ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿಗಳನ್ನು ಜಾರಿ ಮಾಡಿದೆ ಎಂದು ಕರಾವಳಿಯ ಭಕ್ತರು ಅಸಮಧಾನಗೊಂಡಿದ್ದಾರೆ,
ಕರ್ನಾಟಕದಿಂದ ತೆರಳುವ ಭಕ್ತರು ಇಲ್ಲಿಂದ ಒಂದು ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರ ಪಡೆದು ತೆರಳಬೇಕು, ಇದು ಸಾಲದೆಂಬಂತೆ, ನೀಲಕಲ್ ಎಂಬಲ್ಲಿ ಇನ್ನೊಂದು ಬಾರಿ, ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಕೇರಳ ಸರಕಾರ ತಿಳಿಸಿದ್ದು, ಇದು ಉಡುಪಿಯ ಅಯ್ಯಪ್ಪ ಭಕ್ತರನ್ನ ಕೆರಳಿಸಿದೆ. ಒಂದೆಡೆ ಎರಡೆರಡು ಬಾರಿ ಕೋವಿಡ್ ಟೆಸ್ಟ್ ಮಾಡಬೇಕು, ಇದರ ಜೊತೆಗೆ ದೇವಾಲಯದಲ್ಲಿ ಇರುಮುಡಿ ವಾಪಾಸ್ ಮಾಡಲಾಗುವುದಿಲ್ಲ, ಭಕ್ತರ ತುಪ್ಪ ಸ್ವೀಕರಿಸುವುದಿಲ್ಲ, ಊಟ ಹಾಗೂ ತಂಗಲು ವ್ಯವಸ್ಥೆ ಕೂಡಾ ದೇಗುಲ ಆಡಳಿತ ಮಂಡಳಿ ಮಾಡುವುದಿಲ್ಲ ಎಂದು ತಿಳಿಸಿದ್ದು ಈ ಎಲ್ಲಾ ಕ್ರಮಗಳನ್ನು ವಿರೋಧಿಸಿರುವ ಕರಾವಳಿಯ ಅಯ್ಯಪ್ಪ ಭಕ್ತರು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೇರಳ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೆ ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ. ಎರಡೆರಡು ಬಾರಿ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ ಎಂದು ಭಕ್ತರು ಪ್ರಶ್ನಿಸಿದ್ದಾರೆ ಈಗಾಗಲೆ ಭವನಂ ಸನ್ನಿಧಾನಂ ಅಭಿಯಾನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ಕೈಜೋಡಿಸಿದ್ದು, ಕಾರವಳಿಯ ಭಕ್ತರು ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಶಿಬಿರಗಳನ್ನು ಮಾಡದೆ, ಮನೆಗಳಲ್ಲೇ ಅಯ್ಯಪ್ಪ ದೇವರನ್ನ ಕುಟುಂಬ ಸಮೇತವಾಗಿ ಆರಾಧಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ