ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2022-23ನೇ ಸಾಲಿನ ಪ್ರವೇಶ ಆರಂಭ
ಉಡುಪಿ ಜೂ.27 (ಉಡುಪಿ ಟೈಮ್ಸ್ ವರದಿ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2022-23ನೇ ಸಾಲಿನ ಪ್ರವೇಶ ಆರಂಭಗೊಂಡಿದೆ ಎಂದು ವಿವಿಯ ಕುಲಪತಿ ಡಾ.ಎಸ್ ವಿದ್ಯಾ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾನಿಲಯವಾಗಿದೆ. ಪ್ರಸ್ತುತ ಮುಕ್ತ ವಿವಿಯ 2022-23ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು, ಪ್ರವೇಶಾತಿಯು ವರ್ಷದಲ್ಲಿ ಜನವರಿ ಮತ್ತು ಜುಲೈ ಎರಡು ಆವೃತ್ತಿಯಲ್ಲಿ ನಡೆಯಲಿದೆ. ಆದ್ದರಿಂದ `ಆನ್‍ಲೈನ್ ಮೂಲಕ ವಿದ್ಯಾರ್ಥಿಗಳು ವರ್ಷಪೂರ್ತಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಈ ಪ್ರವೇಶಾತಿಯನ್ನು ಕ.ರಾ.ಮು.ವಿಯ ಕೇಂದ್ರ ಕಛೇರಿ, ಪ್ರಾದೇಶಿಕ ಕೇಂದ್ರ, ಅಧ್ಯಯನ ಕೇಂದ್ರಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿವಿಯ ಎಲ್ಲಾ ಕಾರ್ಯಚಟುವಟಿಕೆಗಳು ಸಂಪೂರ್ಣ ಡಿಜಿಟಲೀಕರಣವಾಗಿದ್ದು, ಪ್ರವೇಶಾತಿಗಳು, ಪರೀಕ್ಷಾ ಮತ್ತು ಇನ್ನಿತರ ಶುಲ್ಕಗಳು ಅನ್ ಲೈನ್ ಮೂಲಕವೇ ನಡೆಯುತ್ತಿದೆ. ವಿದ್ಯಾರ್ಥಿಗಳು ತಾವಿರುವ ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ಕ್ರಮಗಳು, ಪದವಿ ಅಧಾರಿತ ಒಂದು ವರ್ಷದ ಪಿಜಿ ಶಿಕ್ಷಣ ಕಾರ್ಯಕ್ರಮಗಳು, 10+2 ಅಧಾರಿತ ಒಂದು ವರ್ಷದ ಡಿಪ್ಲೋಮಾ ಶಿಕ್ಷಣ ಕಾರ್ಯಕ್ರಮಗಳು, ಅರು ತಿಂಗಳ ಅವಧಿಯ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳು ಯು.ಜಿ.ಸಿಯ ನಿಯಮಾನುಸಾರ ನಡೆಸುತ್ತಿದೆ. ಯು.ಜಿ.ಸಿಯ ನಿಯಮದಂತೆ ವಿದ್ಯಾರ್ಥಿಗಳು ದ್ವಿ-ಪದವಿಯನ್ನು (ಎರಡು ಡಿಗ್ರಿ) ಪಡೆಯಲು ಅವಕಾಶವಿರುತ್ತದೆ. ಶಿಕ್ಷಣ ವಂಚಿತರು ತಮ್ಮ ಅಪೇಕ್ಷೆಯಂತೆ ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಇಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಏಕ ಕಾಲದಲ್ಲಿ ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ ಏಕಕಾಲದಲ್ಲಿ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (ಕೋರ್ಸ್‍ಗಳನ್ನು) ವ್ಯಾಸಂಗ ಮಾಡಲು ಅವಕಾಶವಿರುತ್ತದೆ. ಹಾಗೂ ಇತರ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಅಗದಿದ್ದರೆ, ಅರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆಮಾಡಿಕೊಂಡು ವಿದ್ಯಾಬ್ಯಾಸ ಮುಂದುವರೆಸಬಹುದು ಎಂದು ತಿಳಿಸಿದ್ದಾರೆ.
ಇನ್ನು ಪ್ರವೇಶಾತಿ ಶುಲ್ಕದಲ್ಲಿ ವಿಶೇಷ ರಿಯಾಯ್ತಿಯನ್ನು ನೀಡಲಾಗಿದ್ದು, ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ / ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದಲ್ಲಿ ಬೋಧನಾ ಶುಲ್ಕದಲ್ಲಿ ಶೇ.15 ರಷ್ಟು ರಿಯಾಯಿತಿ. ಕೋವಿಡ್ ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ, ಟ್ರಾನ್ಸ್ ಜೆಂಡರ್/ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಬಿ.ಎಡ್ ಮತ್ತು ಎಂ.ಬಿ.ಎ ಹೊರತುಪಡಿಸಿ ದೃಷ್ಟಿಹೀನ ಮಕ್ಕಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋದನಾ ಶುಲ್ಕದಲ್ಲಿ ಶೇ.30 ರಷ್ಟು ರಿಯಾಯಿತಿ ಇರುತ್ತದೆ ಎಂದು ತಿಳಿಸಿದ್ದಾರೆ.
ಉಡುಪಿ ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರ ವ್ಯಾಪ್ತಿಯಲ್ಲಿ ಸದ್ಯ ನಾಲ್ಕು “ಕಲಿಕಾರ್ಥಿ ಸಹಾಯಕ ಕೇಂದ್ರ’ಗಳಿದ್ದು ತಾಲ್ಲೋಕಿಗೊಂದು “ಕಲಿಕಾರ್ಥಿ ಸಹಾಯಕ ಕೇಂದ್ರ”ಗಳನ್ನು ತೆರೆದು ಜಿಲ್ಲೆಯ ಪ್ರತಿ ಹಳ್ಳಿಯ ಪ್ರತಿ ಮನೆಗಳಿಗೂ ಉನ್ನತ ಶಿಕ್ಷಣವನ್ನು ನೀಡಲು ಕರಾಮುವಿ ಬದ್ಧವಾಗಿದೆ.
ಪ್ರಸ್ತುತ ಮುಕ್ತ ವಿವಿ 2022-23 ನೇ ಸಾಲಿನ ಪ್ರವೇಶಾತಿಯು ಹಳೇ ಜಿಲ್ಲಾ ಪಂಚಾಯತ್ ಕಟ್ಟಡ, ಎರಡನೇ ಮಹಡಿ, ಬನ್ನಂಜೆಯಲ್ಲಿ ಮತ್ತು ಅಧಿಕೃತ ಕಲಿಕಾರ್ಥಿ ಸಹಾಯಕ ಕೇಂದ್ರಗಳಾದ ಉಡುಪಿಯ ಎಂ.ಜಿ.ಎಂ ಕಾಲೇಜ್, ಬೈಂದೂರಿನ ಖಂಬದಲೋಣೆಯಲ್ಲಿರುವ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್, ಕಾಲೆಳದ ಭುವನೇಂದ್ರ ಕಾಲೇಜ್, ಶಿರಡಿ ಸಾಯಿ ಪದವಿ ಕಾಲೇಜುಗಳಲ್ಲಿ ನಡೆಯುತ್ತಿದೆ. ಹೀಗೆ ವಿದ್ಯಾರ್ಥಿ ಸ್ನೇಹಿಯಾಗಿ ಹತ್ತು ಹಲವು ಉಪಯೋಗಗಳನ್ನು ಕ.ರಾ.ಮು.ವಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಇದರ ಸದೂಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಡಾ. ಕೆ.ಪಿ ಮಹಾಲಿಂಗಯ್ಯ, ಕಾರ್ಕಳದ ಶಿರಡಿ ಸಾಯಿ ಕಾಲೇಜಿನ ಅಭಿಷೇಕ್ ಸುವರ್ಣ, ಮಂಗಳೂರು ಪ್ರಾದೇಶಿಕ ನಿರ್ದೇಶಕರು ಬಿ. ಬಸವರಾಜು ಉಪಸ್ಥಿತರಿದ್ದರು.