ಪಾಟ್ನಾ: ಪಶುವೈದ್ಯನ ಅಪಹರಿಸಿ ಬಲವಂತದ ಮದುವೆ
ಪಾಟ್ನಾ ಜೂ.25 : ಬಿಹಾರದ ಬೇಗುಸರಾಯ್ ನಲ್ಲಿ ಪ್ರಾಣಿ ಪರೀಕ್ಷಿಸಲೆಂದು ಪಶುವೈದ್ಯನನ್ನು ಕರೆಸಿ ಬಳಿಕ ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ನಡೆದಿದೆ.
ಈ ವಿಚಾರವಾಗಿ ಬೇಗುಸರಾಯ್ ಎಸ್.ಪಿ ಯೋಗೇಂದ್ರ ಕುಮಾರ್ ಅವರು ಮಾತನಾಡಿದ್ದು, ಸಂತ್ರಸ್ತನ ತಂದೆ ಪೊಲೀಸ್ ಠಾಣೆಗೆ ದೂರನ್ನು ಬರೆದು ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಎಸ್.ಎಚ್.ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಈ ಬಗ್ಗೆ ಸಂತ್ರಸ್ತ ಪಶು ವೈದ್ಯರ ತಂದೆ ಮಾತನಾಡಿ, “ನನ್ನ ಮಗನನ್ನು ರಾತ್ರಿ 12 ಗಂಟೆ ಪ್ರಾಣಿಯೊಂದಕ್ಕೆ ಆರೋಗ್ಯ ಸರಿಯಿಲ್ಲ ಎಂದು ಕರೆಸಿಕೊಂಡಿದ್ದರು. ಈ ವೇಳೆ ಮೂವರು ಬಂದು ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ನಮಗೆ ಗಾಬರಿಯಾಯಿತು. ಅದಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.
ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರದಲ್ಲಿ ನಡೆಯುವ ಪದ್ಧತಿಯಾಗಿದೆ. ಜಾಖರ್ಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಇದು ಸಾಮಾನ್ಯವಾಗಿದೆ. ಈ ಪದ್ಧತಿಯಲ್ಲಿ ಬ್ರಹ್ಮಚಾರಿಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವವರನ್ನು ವಧುವಿನ ಕುಟುಂಬ ಅಪಹರಿಸಿ ಮದುವೆ ಮಾಡಿಸುತ್ತಾರೆ ಎನ್ನಲಾಗಿದೆ.