ಬೆಳಗಾವಿ: ಸುವರ್ಣಸೌಧದ ಮುಂದೆ ಒಣ ಹಾಕಿದ ಶಾವಿಗೆ, ಸಾಮಾಜಿಕ ಜಾಲ ತಾಣದಲ್ಲಿ ಭಾರಿ ವೈರಲ್ ಆದ ಫೋಟೋ
ಬೆಳಗಾವಿ, ಜೂ.2 : ಬೆಳಗಾವಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದೀಗ ಈ ವೈರಲ್ ವಿಡಿಯೋಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದು, ಸುವರ್ಣ ವಿಧಾನಸೌಧ ಮುಂದೆ ಶಾವಿಗೆ ಒಣಹಾಕಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಗುತ್ತಿಗೆದಾರ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂತಹ ಘಟನೆ ಮುಂದೆ ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಲೋಕೋಪಯೋಗ ಇಲಾಖೆ ತಿಳಿಸಿದೆ.
ಈ ನಡುವೆ ಬೆಳಗಾವಿಯ ಸುವರ್ಣಸೌಧ ಹೆಚ್ಚೆಂದರೆ ವರ್ಷಕ್ಕೆ ಹತ್ತು ದಿನಬಳಕೆಯಾಗಬಹುದು. ಶಾವಿಗೆ ಒಣ ಹಾಕಿದ್ದು ಸುವರ್ಣ ಸೌಧದ ಭದ್ರತೆ ವಹಿಸಿಕೊಂಡಿರುವ ಪೊಲೀಸರ ನಿರ್ಲಕ್ಷ್ಯದಿಂದ. ಆದರೆ ದಿನಗೂಲಿ ನೌಕರೆಯಾಗಿದ್ದ ಮಹಿಳೆಯನ್ನು ವಜಾ ಮಾಡಿರುವ ಗುತ್ತಿಗೆದಾರರ ನಿರ್ಧಾರ ಖಂಡನೀಯ ಎಂದು ಸಾರ್ವಜನಿಕರು ಆಸಮಾಧಾನ ಹೊರಹಾಕಿದ್ದಾರೆ. ಅಮಾನತುಗೊಂಡ ಗುತ್ತಿಗೆ ದಾರ ಮಹಿಳೆಯಂತೆ ಭದ್ರತೆಗಿದ್ದ ಪೊಲೀಸರ ವಿರುದ್ಧವೂ ನಗರ ಪೊಲೀಸ್ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯಗಳೂ ಕೇಳಿ ಬಂದಿದೆ.
ಹಾಗೂ ಈ ಅತಾಚುರ್ಯದಲ್ಲಿ ಸುವರ್ಣ ಸೌಧಕ್ಕೆ ಭದ್ರತೆ ಒದಗಿಸಿದ್ದ ಪೊಲೀಸರ ವೈಫಲ್ಯ ಮೇಲುನೋಟಕ್ಕೆ ಕಂಡುಬಂದಿದ್ದರೂ ಅಧಿಕಾರಿಗಳು ಮಾತ್ರ ದಿನಗೂಲಿ ಕಾರ್ಮಿಕ ಮಹಿಳೆಯನ್ನ ಕೆಲಸದಿಂದ ವಜಾ ಮಾಡಿರುವುದನ್ನು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಸುವರ್ಣಸೌಧದದಲ್ಲಿ ಶಾವಿಗೆ ಒಣಹಾಕಿದ್ದ ಸುದ್ದಿ ರಾಜ್ಯಾದ್ಯಂತ ವೈರಲ್ ಆದ ನಂತರ ಸ್ವತಃ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುವರ್ಣಸೌಧಕ್ಕೆ ಭೇಟಿ ನೀಡಿದ್ದಾರೆ. ಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಎಂದು ಭದ್ರತೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಮಾರ್ಗಸೂಚಿಯಂತೆ ಪಾಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ, ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಯಾವುದೇ ರೀತಿಯ ಕೆಲಸಗಳನ್ನು ಮಾಡುವಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆ ಪಾಲಿಸಬೇಕು. ಯಾವುದೇ ರೀತಿಯ ಅಚಾತುರ್ಯ ಉಂಟಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ