ಬುರೇವಿ ಚಂಡಮಾರುತ:ಬೆಂಗಳೂರಲ್ಲಿ ಮುಂಜಾನೆಯೇ ಮಳೆ
ಬೆಂಗಳೂರು: ಶ್ರೀಲಂಕಾ ಮತ್ತು ತಮಿಳುನಾಡು ಭಾಗಕ್ಕೆ ಅಪ್ಪಳಿಸಿರುವ ‘ಬುರೇವಿ’ ಚಂಡಮಾರುತದ ಪ್ರಭಾವ ರಾಜಧಾನಿ ಬೆಂಗಳೂರಿಗೆ ತಟ್ಟಿದೆ. ಇಂದು (ಡಿ.3) ಮುಂಜಾನೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ತುಂತುರು ಮಳೆ ಬಂದಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.
ಬೆಂಗಳೂರಿನ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ವಿದ್ಯಾಪೀಠ ಸರ್ಕಲ್, ಮೈಸೂರು ರಸ್ತೆ, ಬಸವನಗುಡಿ, ಎನ್. ಆರ್. ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ ತುಂತುರು ಮಳೆಯಾಗಿದೆ. ಈ ಚಂಡಮಾರುತ ಕರ್ನಾಟಕದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಡಿಸೆಂಬರ್ 3 ಮತ್ತು 4 ರಂದು ಮಳೆಯಾಗಲಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದ್ದಾರೆ.