ಸಹನೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ಸರ್ಕಾರಕ್ಕೆ ಸಲ್ಲುತ್ತದೆ: ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು ಮೇ 30 : ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯ ದುಷ್ಕ್ರತ್ಯ, ಈ ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ ಎಂದು ಮಾಜಿ ಮಾಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ದುಷ್ಕರ್ಮಿಗಳು ಮಸಿ ಎರಚಿ, ಮೈಕ್ ನಿಂದ ಹಲ್ಲೆ ನಡೆಸಿದ ಘಟನೆ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ‘ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯ ದುಷ್ಕ್ರತ್ಯ. ನೆನಪಿರಲಿ, ಈ ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ. ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟದಿದ್ದರೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರುವ ನೈತಿಕತೆ ನಿಮಗಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಗಾರಿದ್ದಾರೆ.
ಹಾಗೂ ”ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ದೈಹಿಕ ಹಲ್ಲೆ, ಭಿನ್ನಾಭಿಪ್ರಾಯವನ್ನು ಸಿದ್ದಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಹನೆ-ಸಜ್ಜನಿಕೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.