ಫೋಟೋಗ್ರಾಫರ್ ಇಲ್ಲವೆಂದು ಮದುವೆ ನಿರಾಕರಿಸಿದ ವಧು
ಲಕ್ನೋ ಮೇ 30 : ನಿಗದಿತ ದಿನದಂದು ನಿಶ್ವಯವಾಗುವ ಮದುವೆ ಮಂಟಪದವರೆಗೆ ಬಂದು ಮುರಿದು ಬೀಳುತ್ತಿರುವ ಘಟನೆಗಳು ಸಾಲು ಸಾಲು ವರದಿಯಾಗುತ್ತಿದೆ. ಆದರೆ ಈ ಮದುವೆಗಳು ಮುರಿದು ಬೀಳಲು ಕಾರಣಗಳು ಮಾತ್ರ ಒಂದಕ್ಕಿಂತ ಒಂದು ವಿಚಿತ್ರವಾಗಿದೆ ಇದೀಗ ಇಂತಹದ್ದೆ ಮತ್ತೊಂದು ಘಟನೆ ನಡೆದಿದ್ದು, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಫೋಟೋ ಗ್ರಾಫರ್ ಇಲ್ಲ ಎಂಬ ಕಾರಣಕ್ಕೆ ವಧು ಮದುವೆಯನ್ನು ನಿರಾಕರಿಸಿದ್ದಾಳೆ.
ಕಾನ್ಪುರ ದೇಹತ್ ನ ಮಂಗಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುವ ರೈತರೊಬ್ಬರು ತಮ್ಮ ಮಗಳ ವಿವಾಹವನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿ ಒಬ್ಬರೊಂದಿಗೆ ನಿಗದಿಪಡಿಸಿದ್ದರು. ಮದುವೆಗಾಗಿ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿ ಮದುಮಕ್ಕಳಿಗೆ ವೇದಿಕೆಯನ್ನೂ ಅಲಂಕರಿಸಲಾಗಿತ್ತು. ಆದರೆ ಈ ಸುಂದರದ ಕ್ಷಣವನ್ನು ಸೆರೆಹಿಡಿಯಲು ಛಾಯಾಗ್ರಹಕನೇ ಇಲ್ಲವೆಂದು ತಿಳಿದ ವಧು ಮದುವೆಯನ್ನು ನಿರಾಕರಿಸಿ ವೇದಿಕೆಯಿಂದ ಮನೆಗೆ ಹಿಂದಿರುಗಿದ್ದಾಳೆ. ಈ ವೇಳೆ ಹಲವಾರು ಮಂದಿ ವಧುವಿನ ಮನವೊಲಿಸಲು ಪ್ರಯತ್ನಿಸಿದ್ದರಾದರೂ, ಇಂದು ನಮ್ಮ ಮದುವೆಯ ಬಗ್ಗೆಯೇ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂದು ಪ್ರಶ್ನಿಸಿದ್ದಾಳೆ.
ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಳಿಕ ವಧು ಹಾಗೂ ವರ ಕುಟುಂಬಸ್ಥರು ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಹಾಗೂ ಬೆಲೆಬಾಳುವ ವಸ್ತುವನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಮದುವೆ ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ.