ಅಮೆರಿಕ: ಶಾಲೆ ಮೇಲೆ ಗುಂಡಿನ ದಾಳಿ 19 ಮಕ್ಕಳು ಸೇರಿದಂತೆ 21 ಮಂದಿ ಸಾವು
ಉವಾಲ್ಡೆ (ಅಮೆರಿಕ) ಮೇ 25 : ಟೆಕ್ಸಸ್ನ ಪ್ರಾಥಮಿಕ ಶಾಲೆಯೊಂದರಲ್ಲಿ 18 ವರ್ಷದ ಯುವಕನೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ.
ದಾಳಿಕೋರನು ಅಲ್ಲಿನ ಸಮೀಪದ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ಸಾಲ್ವಡೋರ್ ರಮೋಸ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ರಕ್ಷಣೆಗೆ ಬಂದಿದ್ದ ಪೊಲೀಸರ ಮೇಲೂ ಈತ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿ ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ.
ರಾಬ್ ಎಲಿಮೆಂಟರಿ ಶಾಲೆಗೆ ನುಗ್ಗಿದ ಈತ ಭೀಕರ ದಾಳಿ ನಡೆಸಿದ್ದಾನೆ. ಶಾಲೆಗೆ ತೆರಳುವುದಕ್ಕೂ ಮುನ್ನ ದಾಳಿಕೋರ ಆತನ ಅಜ್ಜಿಯ ಮೇಲೂ ಗುಂಡು ಹಾರಿಸಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆ ಬಳಿಕ ವಾಹನದಲ್ಲಿ ಬಂದು ಕ್ರ್ಯಾಶ್ ಮಾಡಿ ಏಕಾಂಗಿಯಾಗಿ ಗುಂಡಿನ ದಾಳಿ ನಡೆಸಿದ್ದಾನೆ ಈತ ದೇಹಕ್ಕೆ ರಕ್ಷಾಕವಚಧರಿಸಿದ್ದು, ರೈಫಲ್ ಮತ್ತು ಬ್ಯಾಕ್ ಪ್ಯಾಕ್ ಹೊಂದಿದ್ದ. ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೂ ಗುಂಡು ಹಾರಿಸಿದ್ದು, ಪೊಲೀಸರ ಎನ್ ಕೌಂಟರ್ ನಲ್ಲಿ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಟೆಕ್ಸಾಸ್ ಶಾಲೆಯ ಗುಂಡಿನ ದಾಳಿಗೆ ಬಲಿಯಾದವರಿಗೆ ಗೌರವಾರ್ಥವಾಗಿ ಶನಿವಾರದವರೆಗೆ ಶ್ವೇತಭವನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಿಸಲಾಗಿದೆ.
2012ರಲ್ಲಿ ಕನೆಕ್ಟಿಕಟ್ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಅತಿ ಭೀಕರ ದಾಳಿ ಇದಾಗಿದೆ ಎನ್ನಲಾಗಿದೆ.