ಮಂಗಳೂರು:ಮಳಲಿ ಮಸೀದಿಯೊಳಗೆ ಶಿವ ಶಕ್ತಿ ಸಾನಿಧ್ಯ:ಜ್ಯೋತಿಷ್ಯ ಗೋಪಾಲಕೃಷ್ಣ ಪುದುವಾಳ್
ಮಂಗಳೂರು(ಉಡುಪಿ ಟೈಮ್ಸ್ ವರದಿ) : ತೆಂಕ ಉಳಿಪಾಡಿಯ ಮಳಲಿ ಪೇಟೆಯ ಜುಮಾ ಮಸೀದಿಯ ನವೀಕರಣದ ವೇಳೆ ಮಸೀದಿಯ ಒಳಭಾಗದಲ್ಲಿ ದೇವಾಲಯದ ರಚನೆ ಕಂಡು ಬಂದ ಹಿನ್ನೆಲೆಯಲ್ಲಿ ಜಾಗದ ಹಿನ್ನೆಲೆ ತಿಳಿಯುವ ಸಲುವಾಗಿ ಇಂದು ‘ತಾಂಬೂಲ ಪ್ರಶ್ನೆ’ ಕಾರ್ಯಕ್ರಮ ನಡೆಯಿತು.
ಇಂದು ಬೆಳಗ್ಗೆ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಕೇರಳ ಮೂಲದ ಜ್ಯೋತಿಷ್ಯ ಗೋಪಾಲಕೃಷ್ಣ ಪುದುವಾಳ ನೇತೃತ್ವದಲ್ಲಿ ‘ತಾಂಬೂಲ ಪ್ರಶ್ನೆ’ ಕಾರ್ಯಕ್ರಮ ನಡೆದಿದ್ದು, ಈ ವೇಳೆ ತಾಂಬೂಲ ಪ್ರಶ್ನೆಯಲ್ಲಿ “ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ ಇರುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ನಾಶವಾದ ಶಕ್ತಿ ಇರುವ ಸಾನಿಧ್ಯ ಇದಾಗಿದ್ದು , ಜಪ ತಪ ಧ್ಯಾನ ಮಾಡುತ್ತಿದ್ದ ಜಾಗವಾಗಿದೆ. ಕ್ರಮೇಣ ಯಾರದ್ದೋ ಮರಣಾ ನಂತರ ಹಿಂದಿನವರು ಆ ಜಮೀನನ್ನು ಬಿಟ್ಟು ಹೋಗಿರಬಹುದು. ಪಂಚ ಭೂತಗಳ ಸಾನಿಧ್ಯದಲ್ಲೇ ಆ ಸ್ಥಳ ಇರುವುದು ಖಚಿತ ಅಲ್ಲಿ ಉತ್ಖನನ ಮಾಡಿದರೆ ಹಲವಾರು ಅವಶೇಷಗಳು ಸಿಗಲಿದೆ. ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು ಬಳಿಕ ಅಲ್ಲಿಂದ ದೇವರ ಮೂರ್ತಿ ಹಾಗೂ ಪೂಜಾ ಪರಿಕರಗಳನ್ನು ತೆಗೆದುಕೊಂಡು ಹೋಗಿರಬಹುದು. ಆದರೆ ಕೆಲ ವಸ್ತುಗಳು ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು. ದರ್ಗಾ ಇರುವ ಜಾಗದಲ್ಲಿ ದೈವ ಸ್ಥಿರವಾಗಿರೋದು ಕಂಡುಬಂದಿದೆ. ಈ ಸ್ಥಳದಲ್ಲಿ ದೈವ ಸಾನಿಧ್ಯ ಇದ್ದು, ಈ ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು ಹಾಗೂ ಜೀರ್ಣೋದ್ಧಾರ ದಿಂದ ಮಳಲಿ ಊರಿನ ಜನತೆಗೂ ಒಳಿತಾಗಲಿದೆ ಎಂದು ಹೇಳಿದ್ದಾರೆ.
ಇದು ಶೈವ ವೈಷ್ಣವ ಕಾಲದಲ್ಲಿ ಆದ ಬದಲಾವಣೆ ಇರಬಹುದು ಎಂದ ಅವರು, ಸಮೀಪದ ಗುರುಪುರ ಎಂಬಲ್ಲಿ ಲಿಂಗಾಯತ ಸಮುದಾಯದ ಮಠ ಇತ್ತು. ಊರಿಗೆ ಯಾವುದೇ ತೊಂದರೆಗಳು ಆಗಬಾರದು. ಸಾನಿಧ್ಯ ನಾಶವಾದ ಮೇಲೆ ಮತೊಂದು ಸಾನಿಧ್ಯ ನಿರ್ಮಾಣ ಕಷ್ಟ. ಆದ್ದರಿಂದ ಈಗ ಭೂಮಿ ಯಾರ ಕೈಯಲ್ಲಿ ಇದೆ ಅವರಿಗೂ ಜವಾಬ್ದಾರಿ ಇದೆ. ಎಲ್ಲರೂ ಒಂದೇ ಮನಸ್ಸಿನಲ್ಲಿ ಪ್ರಯತ್ನ ಮಾಡಬೇಕು. ಗೊಂದಲ ಸಮಸ್ಯೆ ನಿವಾರಣೆ ಆಗದಿದ್ದರೆ ಎಲ್ಲರಿಗೂ ಸಮಸ್ಯೆ, ಊರಿಗೆ ಸಮಸ್ಯೆ ಆಗುತ್ತೆ ವಿವಾದಿತ ಜಾಗದಲ್ಲಿ ವಿವಾದಿತ ಜಾಗದಲ್ಲಿ ಮಠಾಧೀಶರು, ಸ್ವಾಮೀಜಿ ಜಪ ತಪ ಧ್ಯಾನ ಮಾಡುತ್ತಿದ್ದರು. ಶೈವ ವೈಷ್ಣವ ಸಂಘರ್ಷ ಕಾಲದಲ್ಲಿ ಆದ ಬದಲಾವಣೆ ಇರಬಹುದು. ಈಗ ಆ ಸ್ಥಳದಲ್ಲಿ ಬೇರೆ ಧರ್ಮೀಯರು ಇದ್ದಾರೆ ಬೇರೆ ಧರ್ಮೀಯರೂ ದೇವರಾರಾಧನೆ ಯನ್ನೇ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು `ತಾಂಬೂಲ ಪ್ರಶ್ನೆ’ಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಂಜಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ) ವರೆಗೆ ಮೇ 24ರ ರಾತ್ರಿ 8 ರಿಂದ ಅನ್ವಯವಾಗುವಂತೆ ಮೇ 26ರ ಬೆಳಗ್ಗೆ 8ರವರೆಗೆ ಸೆ.144ರ ಅನ್ವಯ ಸೆಕ್ಷನ್ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಮಳಲಿ ಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡದ ನವೀಕರಣ ನಡೆಯುತ್ತಿದ್ದಲ್ಲಿ ದೇವಸ್ಥಾನದ ಕುರುಹು ಪತ್ತೆಯಾಗಿದೆ ಎಂದು ಆರೋಪಿಸಿ ಎಪ್ರಿಲ್ 21ರಂದು ಸಂಘ ಪರಿವಾರ.ದ ಕಾರ್ಯಕರ್ತರು ನವೀಕರಣಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೆ, ಬಜರಂಗದಳ-ವಿಎಚ್‍ಪಿ ಮುಖಂಡರು ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
‘ಮಸೀದಿ ಆಡಳಿತ ಮಂಡಳಿಯವರು, ಪ್ರಮುಖರ ಸಭೆ ನಡೆಸಲಾಗಿದ್ದು, ಮಸೀದಿ ಆಡಳಿತ ಮಂಡಳಿಯವರು ನ್ಯಾಯಾಲಯದ ಆದೇಶ ಪಾಲಿಸುವ ಜತೆಗೆ ಜಿಲ್ಲಾಡಳಿತದ ನಿರ್ದೇಶನಕ್ಕೆ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ. ವಿವಿಧ ಸಂಘಟನೆಗಳು ಹಲವಾರು ರೀತಿಯ ಪ್ರಶ್ನೆಗಳನ್ನು ಎತ್ತಿದ್ದು, ಅದು ಅವರ ವೈಯಕ್ತಿಕ ವಿಚಾರವಾಗಿದೆ. ಜಿಲ್ಲೆಯ ಜನರು ಶಾಂತಿ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪ್ರತಿಕ್ರಿಯಿಸಿದ್ದಾರೆ.”