ದ.ಕ: ಜಿಲ್ಲೆಯಲ್ಲಿ ಮರಳು ಲಭ್ಯತೆ ವಿಚಾರದಲ್ಲಿ ಗೊಂದಲ ಬೇಡ, ಸಾಕಷ್ಟು ಮರಳು ಲಭ್ಯವಿದೆ : ಜಿಲ್ಲಾಧಿಕಾರಿ
ಮಂಗಳೂರು(ಉಡುಪಿ ಟೈಮ್ಸ್ ವರದಿ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಲಭ್ಯತೆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಜಿಲ್ಲೆಯಲ್ಲಿ ಸಾಕಷ್ಟು ಮರಳು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಮರಳು ಲಭ್ಯತೆ ಹಾಗೂ ದರದ ವಿವಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಣೆ ನೀಡಿದ ಅವರು, ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರ ಹೆಚ್ಚಿದೆ ಎಂಬ ಮಾತು ಸರಿಯಲ್ಲ. ದ.ಕ. ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಮರಳು ಸಂಗ್ರಹವಿದೆ. ಈಗಾಗಲೇ ಹೂಳೆತ್ತುವಿಕೆ ಮೂಲಕ ಸಂಗ್ರಹಿಸಲಾದ 200 ಮೆಟ್ರಿಕ್ ಟನ್ ಮರಳು ಲಭ್ಯ ಇದೆ. ಸಂಗ್ರಹಿಸಿಡಲು ಜಾಗದ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಮರಳು ಜಿಲ್ಲೆಯ ನಿರ್ಮಾಣ ಕಾಮಗಾರಿಗೆ ಲಭ್ಯವಾಗಲಿದೆ. ಹೊರ ಜಿಲ್ಲೆಯಿಂದಲೂ ಮರಳಿಗೆ ಬೇಡಿಕೆ ಇದ್ದರೂ ಅನುಮತಿ ನೀಡಲಾಗಿಲ್ಲ. ಸದ್ಯ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಯಾರೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದ ಅವರು, ಶಂಭೂರು ಹಾಗೂ ಮರವೂರಿನ ಡ್ಯಾಂನಲ್ಲಿ ಹೂಳೆತ್ತುವಿಕೆಯ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ. ಸಿಹಿನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ಮರಳು ಮಿತ್ರ ಆ್ಯಪ್ ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗೆ 10 ಮೆಟ್ರಿಕ್ ಟನ್ ಮರಳು ಪಡೆಯಬಹುದು. ಜಿಎಸ್ ಟಿ ಮತ್ತು ಸಾಗಾಟ ವೆಚ್ಚದೊಂದಿಗೆ ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳನ್ನು ಖರೀದಿಸಬಹುದು ಎಂದು ತಿಳಿಸಿದ್ದಾರೆ