ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿಯಲ್ಲಿ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳ ವಿವರ

ಉಡುಪಿ ಮೇ.19 (ಉಡುಪಿ ಟೈಮ್ಸ್ ವರದಿ): ಇಂದು ಮುಂಜಾನೆಯಿಂದ ಎಲ್ಲರ ಚಿತ್ತ ನೆಟ್ಟಿದ್ದ ಎಸ್.ಎಸ್.ಎಲ್.ಸಿ. ಪರಿಕ್ಷಾ ಫಲಿತಾಂಶಕ್ಕೆ ತೆರೆ ಬಿದ್ದಿದೆ. ಮಧ್ಯಾಹ್ನದ ವೇಳೆ ಪರಿಕ್ಷಾ ಫಲಿತಾಂಶ ಹೊರಬಿದ್ದು ರಾಜ್ಯದಲ್ಲಿ 145 ಮಂದಿ ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲಿಯೂ ಐವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಜಿಲ್ಲೆಯ ಉಡುಪಿಯ ಬಾಲಕೀಯರ ಜೂನಿಯರ್ ಕಾಲೇಜಿನ ಗಾಯತ್ರಿ, ಉಡುಪಿಯ ಮಲ್ಪೆಯ ಸರಕಾರಿ ಜೂನಿಯರ್ ಕಾಲೇಜಿನ ಪುನೀತ್ ನಾಯ್ಕ, ಕುಂದಾಪುರದ ಕಾಳಾವರದ ಸರಕಾರಿ ಹೈಸ್ಕೂಲ್ ನ ನಿಶಾ, ಸಿದ್ದಾಪುರದ ಸರಕಾರಿ ಹೈಸ್ಕೂಲ್ ನ ವೈಷ್ಣವಿ ಶೆಟ್ಟಿ, ಬೈಂದೂರಿನ ಸಾಂದೀಪನಿ ಶಾಲೆಯ ಅಕ್ಷತಾ ಇವರು ಪರೀಕ್ಷೆಯಲ್ಲಿ ಸಂಪೂರ್ಣ ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ವಿದ್ಯಾರ್ಥಿಗಳು ಕಲಿಯುವ ಮನಸ್ಸು, ಹುಮ್ಮಸ್ಸು ಇದ್ದರೆ ಯಾವುದೇ ಸಮಸ್ಯೆ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಆರ್ಥಿಕ ಸಮಸ್ಯೆ ವಿದ್ಯಾರ್ಥಿಗಳನ್ನು ಕುಗ್ಗಿಸುತ್ತದೆ. ಆದರೆ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಮೆಟ್ಟಿನಿಂತು ದಿನಾ ಬೆಳಿಗ್ಗೆ ಬೇಗ ಎದ್ದು ಮೀನುಗಾರಿಕೆಯ ಕೆಲಸಕ್ಕೆ ಹೋಗಿ ನಂತರ ಶಾಲೆಗೆ ಹೋಗುತ್ತಿದ್ದ 10 ನೇ ತರಗತಿ ಬಾಲಕ ಇಂದು ರಾಜ್ಯದ ಟಾಪರ್ ಗಳ ಪಟ್ಟಿಯಲ್ಲಿ ಇದ್ದಾನೆ ಎಂದರೆ ಇದು ಉಡುಪಿ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ವಿಚಾರ. ಈ ಸಾಧನೆ ಮಾಡಿರುವುದು ಉಡುಪಿ ಜಿಲ್ಲೆಯ ಮಲ್ಪೆ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಪುನೀತ್ ನಾಯ್ಕ್ ಅವರು. ಮನೆಯಲ್ಲಿ ಬಡತನ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಮೀನುಗಾರಿಕೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ನಡುವೆಯೂ ಪುನೀತ್ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿದ್ದಾರೆ. ಯಾವುದೇ ಟ್ಯೂಷನ್ ಗೆ ಹೋಗದೇ ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನೇ ಕೇಳಿ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದ ಪುನೀತ್ ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಯ್ತು ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಹಾಗೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಬೆಳಗ್ಗೆ ಬೇಗ ಎದ್ದು ಮೀನುಗಾರಿಕೆಯ ಕೆಲಸಕ್ಕೆ ಹೋಗುತ್ತಿದ್ದೆ. ಕಷ್ಟ ಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ ಎನ್ನುವ ಇವರು ಮುಂದೊಂದು ದಿನ ಇನ್ನಷ್ಟು ಉತ್ತಮವಾಗಿ ಓದಿ ಜಿಲ್ಲಾಧಿಕಾರಿ ಆಗಬೇಕೆಂಬ ಕನಸು ಹೊಂದಿದ್ದಾರೆ.

ಕಾಳಾವರ-ಸಳ್ವಾಡಿಯಲ್ಲಿ ಸಣ್ಣ ಪ್ರಮಾಣದ ಬಟ್ಟೆ ವ್ಯಾಪಾರಿಯಾಗಿರುವ ಶ್ರೀನಿವಾಸ ಜೋಗಿ ಅವರ ಪುತ್ರಿ ನಿಶಾ ಇಂದು ರಾಜ್ಯವೇ ಕೊಂಡಾಡುವ ಸಾಧನೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಗ್ರಾಮೀಣ ಭಾಗವಾದ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ನಿಶಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಳಾವರ-ಸಳ್ವಾಡಿ ನಿವಾಸಿ ಶ್ರೀನಿವಾಸ ಜೋಗಿ, ಆಶಾ ದಂಪತಿಗಳ ಪುತ್ರಿ ನಿಶಾ 9 ನೇ ತರಗತಿ ಓದುತ್ತಿರುವ ಸಹೋದರಿ ಮತ್ತು ಅಜ್ಜ ಅಜ್ಜಿ ಜೊತೆ ವಾಸವಿದ್ದಾರೆ. 2 ಕಿ.ಮೀ ದೂರದ ವರೆಗೆ ಬಸ್ಸಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ನಿಶಾ ಅವರು, ಬೆಳಿಗ್ಗೆ ಹಾಗೂ ಸಂಜೆ ಸಹಿತ ಬಿಡುವಿನ ವೇಳೆ ಓದುವ ಹವ್ಯಾಸ ಹೊಂದಿದ್ದರು. ಇದರ ಜೊತೆಗೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡಾ ಪಡೆದಿರುವ ಇವರು, ಯಕ್ಷಗಾನ ಕಲೆಯನ್ನು ಸಹ ಕಲಿಯುತ್ತಿದ್ದಾರೆ. 625 ಅಂಕದಲ್ಲಿ ಒಂದೆರಡು ಅಂಕ ಕಳೆದುಕೊಳ್ಳುವ ಭಯವಿತ್ತು. ಆದರೆ 625 ಅಂಕ ಪಡೆದಿದ್ದಕ್ಕೆ ತುಂಬಾ ಸಂತಸವಾಗಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ ವೈದ್ಯಯಾಗುವ ಆಸೆಯಿದೆ ಎನ್ನುವ ಅವರು, ತನ್ನ ಓದಿಗೆ ಸಹಕರಿಸಿದ ಮನೆಯವರು, ಶಿಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಮಗಳ ಸಾಧನೆ ಬಗ್ಗೆ ಪೆÇೀಷಕರು ಖುಷಿಪಟ್ಟಿದ್ದಾರೆ

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಡಿಯಾಳಿಯ ಪ್ರಕಾಶ್ ದೇವಾಡಿಗ ಅವರ ಮಗಳು ಉಡುಪಿ ಸರಕಾರಿ ಬಾಲಕೀಯರ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿ ಇಂದು ರಾಜ್ಯದ ಎಸ್.ಎಸ್.ಎಲ್.ಸಿ ಯ ಟಾಪರ್ ಗಳಲ್ಲಿ ಒಬ್ಬರು. ಈ ಹಿಂದೆ ಇದೇ ಕಾಲೇಜಿನ ಟಾಪರ್ ಆಗಿದ್ದ ಸಮತಾ ಎಂಬ ವಿದ್ಯಾರ್ಥಿನಿಯಿಂದ ಪ್ರೇರಣೆಗೊಂಡು ತಾನೂ ಕಠಿಣ ಶ್ರಮ ಪಟ್ಟು ಓದಿ ಇಂದು ಟಾಪರ್ ಆಗಿ ಸಾಧನೆ ಮಾಡಿದ್ದಾರೆ. ಇವರಿಗೆ ಒಬ್ಬ ಅಣ್ಣ ಇದ್ದು ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ವಿಜ್ಞಾನ ವಿಭಾದಲ್ಲಿ ಓದಿ ಕಾರ್ಡಿಯೋಲಿಸ್ಟ್ ಆಗುವ ಮಹದಾಸೆಯನ್ನು ಹೊಂದಿದ್ದಾರೆ.  

ಟಾಪರ್ ಉಡುಪಿಯ ಸರಕಾರಿ ಬಾಲಕಿಯರ ಜೂನಿಯರ್ ಕಾಲೇಜ್ ನ ವಿದ್ಯಾರ್ಥಿನಿ ಗಾಯತ್ರಿ ದೇವಾಡಿಗ ಕಡಿಯಾಳಿ ಅವರಿಗೆ ವಿದ್ಯಾರ್ಥಿನಿಯರಿಂದ ಶುಭಾಶಯ

ಇವರೊಂದಿಗೆ ಸಿದ್ದಾಪುರದ ಪಿಡ್ಲ್ಯೂಡಿ ಕಾಂಟ್ರಾಕ್ಟರ್ ಆಗಿರುವ ವಸಂತ್ ಕುಮಾರ್ ಶೆಟ್ಟಿ ಹಾಗೂ ಸುಷ್ಮಾ ವಿ ಶೆಟ್ಟಿ ದಂಪತಿಗಳ ಪುತ್ರಿ ಸಿದ್ದಾಪುರದ ಸರಕಾರಿ ಹೈಸ್ಕೂಲ್ ನ ವೈಷ್ಣವಿ ಶೆಟ್ಟಿ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ 625 ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. 7 ನೇ ತರಗತಿ ವರೆಗೆ ಖಾಸಗಿ ಶಾಲೆಯಲ್ಲಿ ಕಲಿತ ಇವರು ನಂತರ ತಮ್ಮ ವ್ಯಾಸಂಗವನ್ನು ಸರಕಾರಿ ಶಾಲೆಯಲ್ಲಿ ಆರಂಭಿಸಿದ್ದರು. ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹ, ಮನೆಯಲ್ಲಿ ಪೋಷಕರ ಬೆಂಬಲ ಇಂದು ವೈಷ್ಣವಿ ಅವರನ್ನು ರಾಜ್ಯದ ಟಾಪರ್ ಗಳ ಪಟ್ಟಿಯಲ್ಲಿ ಗುರುತಿಸುವಂತೆ ಮಾಡಿದೆ.

ದಿನಾ ಮಾಡುವ ಪಾಠವನ್ನು ಇಷ್ಟಪಟ್ಟು ಅಂದಿನ ದಿನವೇ ಅಭ್ಯಾಸ ಮಾಡುತ್ತಿದ್ದೆ, ದಿನಾ ಬೆಳಿಗ್ಗೆ ಧ್ಯಾನ ಮಾಡುತ್ತಿದ್ದೂದರಿಂದ ಓದುವುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಿತ್ತು. ಯಾವುದೇ ಒತ್ತಡ ಇಲ್ಲದೆ ನಿರಾಯಾಸವಾಗಿ ಓದುತ್ತಿದ್ದೆ. ಪೋಷಕರು ಕಲಿಕೆಯ ವಿಚಾರದಲ್ಲಿ ಯಾವುದೇ ಒತ್ತಡ ಹಾಕದೇ ಕಲಿಕೆಗೆ ನೀಡಿದ ಸ್ವಾತಂತ್ರ್ಯ ಹಾಗೂ ಶಿಕ್ಷಕರ ಗುಣಮಟ್ಟದ ಶಿಕ್ಷಣ ಹಾಗೂ ಪ್ರೋತ್ಸಾಹ ಇಂದು ನನ್ನನ್ನು ಟಾಪರ್ ಆಗುವಂತೆ ಮಾಡಿದೆ ಎನ್ನುವ ಅವರು, ವಿಜ್ಞಾನ ವಿಭಾಗದಲ್ಲಿ ಕಲಿತು ವೈದ್ಯೆಯಾಗುವ ಗುರಿಯನ್ನು ಹೊಂದಿದ್ದಾರೆ. ಮಗಳ ಸಾಧನೆ ಬಗ್ಗೆ ಸಂತಹ ಹಂಚಿಕೊಂಡಿರುವ ತಂದೆ ವಸಂತ ಕುಮಾರ್ ಶೆಟ್ಟಿ ಅವರು, ಸರಕಾರಿ ಶಾಲೆಯ ಗುಣ ಮಟ್ಟದ ಶಿಕ್ಷಣದ ಬಗೆ ನಂಬಿಕೆ ಇಟ್ಟು ಮಗಳನ್ನು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಸೇರಿಸಿದೆವು. ಅವಳು ಪಠ್ಯದ ಜೊತೆಗೆ ಚಿತ್ರ ಕಲೆ ಹಾಗೂ ಇತರ ಕಲಿಕಾ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದಳು. ಹಾಗಾಗಿ ಈ ಸಾಧನೆ ನಮಗೆ ಖುಷಿ ನೀಡಿದೆ ಎನ್ನುತ್ತಾರೆ.

ಇವರ ಜೊತೆಗೆ ಬೈಂದೂರಿನ ಶಿಕ್ಷಕ ದಂಪತಿಗಳಾದ ನಾಗೇಶ್ ನಾಯ್ಕ್ ಹಾಗೂ ಶಾಲಿನಿ ಅವರ ಪುತ್ರಿ ನಾಗೂರು ಸಂದೀಪನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಕ್ಷತಾ ನಾಯ್ಕ್ ಅವರು 625 ಕ್ಕೆ 625 ಅಂಗ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಪರೀಕ್ಷೆಯ ಮೊದಲ ಎರಡು ತಿಂಗಳಿಂದ ತಯಾರಿ ನಡೆಸಿ ಅಭ್ಯಾಸ ಆರಂಭಿಸಿದ್ದರಿಂದ ಉತ್ತರ ಪತ್ರಿಕೆ ಬರೆಯುವಾಗ ಯಾವುದೇ ರೀತಿಯ ಮಾನಸಿಕ ಒತ್ತಡವಾಗಲೀ, ಭಯವಾಗಲೀ ಆಗಲಿಲ್ಲಾ. ಎಲ್ಲಾ ಪಠ್ಯಗಳನ್ನು ಸರಿಯಾದ ಕ್ರಮದಲ್ಲಿ ಓದಿ ಅರ್ಥಮಾಡಿಕೊಳ್ಳುತ್ತಿದ್ದೆ ಎಂದು ತಮ್ಮ ಓದಿನ ಬಗ್ಗೆ ತಿಳಿಸುತ್ತಾರೆ. ಹಾಗೂ ಮುಂದೆ ವಿಜ್ಞಾನ ವಿಷಯ ಆಯ್ದುಕೊಂಡು, ಎಂ.ಬಿ.ಬಿ.ಎಸ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ಈ ಐವರು ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆಗೆ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಇಂದು ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿದ್ದಾರೆ. ಇವರ ಈ ಸಾಧನೆ ಇನ್ನು ಇವರ ಮುಂದಿನ ವಿಧ್ಯಾಭ್ಯಾಸದಲ್ಲೂ ಮುಂದುವರೆಯಲಿ ಹಾಗೂ ಇವರ ಮುಂದಿನ ಕನಸುಗಳೂ ನೆರವೇರಲಿ ಎಂದು “ಉಡುಪಿ ಟೈಮ್ಸ್” ಬಳಗ ಆಶಿಸುತ್ತದೆ.

Leave a Reply

Your email address will not be published. Required fields are marked *

error: Content is protected !!