ಬ್ರಹ್ಮಾವರ :ಅಕ್ರಮ ಜಾನುವಾರು ಸಾಗಾಟದ ಎರಡು ಪ್ರತ್ಯೇಕ ಪ್ರಕರಣದಲ್ಲಿ 3 ಆರೋಪಿಗಳ ಬಂಧನ
ಬ್ರಹ್ಮಾವರ ಎ.13( ಉಡುಪಿ ಟೈಮ್ಸ್ ವರದಿ) ಬ್ರಹ್ಮಾವರ ಮತ್ತು ಹೆಬ್ರಿ ಠಾಣೆಯಲ್ಲಿ ದಾಖಲಾದ ಅಕ್ರಮ ಜಾನುವಾರು ಸಾಗಾಟದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು 20 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಜಾನುವಾರು ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಅವರು ಇತರ ಸಿಬ್ಬಂದಿಗಳೊಂದಿಗೆ ಹೇರೂರು ಗ್ರಾಮದ ಹೇರಂಜೆ, ಕಾಡೋಳಿ ಎಂಬಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ದನಗಳನ್ನು ತುಂಬಿ ಹೊರಡಲು ಅನುವಾಗುತ್ತಿದ್ದಾಗ ಥೋಮಸ್ ಡಿ ಸೋಜಾ (62, ಕೃಷ್ಣ ಪೂಜಾರಿ (46), ನಾಗೇಶ ಮರಕಾಲ (40) ಎಂಬವರನ್ನು ವಶಕ್ಕೆ ಪಡೆದು, ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿದ್ದ 6 ಕರುಗಳು ಹಾಗೂ 1 ದನವನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಹೆಬ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ, ಅಕ್ರಮ ಗೋ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಠಾಣೆಯ ಪಿಎಸ್ ಐ ಸುದರ್ಶನ್ ದೊಡಮನಿ ಅವರು ಇತರ ಸಿಬ್ಬಂದಿ ಗಳೊಂದಿಗೆ
ನಿನ್ನೆ ತಡರಾತ್ರಿ ಸೊಮೇಶ್ವರ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಬಳಿಕ ಇಂದು ನಸುಕಿನ ವೇಳೆ ಕಾಸನಮಕ್ಕಿ ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಅದರ ಚಾಲಕನು ನಿಲ್ಲಿಸದೇ ಮುಂದೆ ಚಲಿಸಿದ್ದಾನೆ. ಆಗ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದು, ಆರೋಪಿಗಳು ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿ ವಾಹನವನ್ನು ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು ನಿಲ್ಲಿಸಿ ಪರಾರಿಯಾಗಿದ್ದಾರೆ.
ಈ ವೇಳೆ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದಕ್ಕೆ ನಂಬ್ರ ಪ್ಲೇಟ್ ಇಲ್ಲದಿರುವುದು ಕಂಡು ಬಂದಿದೆ. ಹಾಗೂ ವಾಹನದಲ್ಲಿ 14 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿರುವುದು ಪತ್ತೆಯಾಗಿದೆ. ಈ ಪೈಕಿ ಒಂದು ಜಾನುವಾರು ಮೃತಪಟ್ಟಿದ್ದು, 13 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.